ಬೆಂದೂರ್‌ವೆಲ್ ಅಪಘಾತಪುತ್ರ ಮೃತ್ಯು, ತಾಯಿ ಗಂಭೀರ

accident
Published on

ಮಂಗಳೂರು: ನಗರದ ಬೆಂದೂರ್‌ವೆಲ್ ಸಮೀಪ ಶುಕ್ರವಾರ ನಡೆದ ಅಪಘಾತಕ್ಕೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಬಾಲಕ ರಸ್ತೆಗೆ ಬಿದ್ದು ಮೃತಪಟ್ಟರೆ, ಆತನ ತಾಯಿ ಪ್ರಾಧ್ಯಾಪಕಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.


ನಗರದ ನಂತೂರು ನಿವಾಸಿ ಹಾರ್ದಿಕ್ (11) ಮೃತಪಟ್ಟರೆ, ಆತನ ತಾಯಿ ಪ್ರಾಧ್ಯಾಪಕಿ ಶ್ವೇತಾ (35) ಗಾಯಗೊಂಡವರು.


ಮಧ್ಯಾಹ್ನ 3ಗಂಟೆ ವೇಳೆಗೆ ಶ್ವೇತಾ ಅವರು ತನ್ನ ಮಗ ಹಾರ್ದಿಕ್ ಜತೆಗೆ ಕಂಕನಾಡಿ ಕಡೆಯಿಂದ ನಂತೂರಿಗೆ ತೆರಳುತ್ತಿದ್ದಾಗ ಬೆಂದೂರ್‌ವೆಲ್ ಸಮೀಪ ನಿಂತಿದ್ದ ಬಸ್ ಏಕಾಏಕಿ ಚಲಿಸಿದೆ. ಈ ವೇಳೆ ಸ್ಕೂಟಿ ಬಸ್‌ಗೆ ಡಿಕ್ಕಿಯಾಗಿದ್ದು ತಾಯಿ, ಮಗ ಇಬ್ಬರೂ ರಸ್ತೆಗೆಸೆಯಲ್ಪಟ್ಟರು. ಇದೇ ವೇಳೆ ಇನ್ನೊಂದು ಬಸ್ ಏಕಾಏಕಿ ಆಗಮಿಸಿದ್ದು, ಇದರಡಿಗೆ ಬಿದ್ದ ಬಾಲಕ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ. ಬಾಲಕ ನಗರದ ಕೊಡಿಯಾಲ್‌ಬೈಲ್ ಶಾಲೆಯೊಂದರ 5ನೇ ತರಗತಿ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.


ನಗರದ ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರು ನಗರದಲ್ಲಿ ಬಸ್ ಹಾಗೂ ಲಾರಿಗಳ ನಿರ್ಲಕ್ಷೃದ ಚಾಲನೆ ಹೆಚ್ಚಾಗುತ್ತಿದ್ದು, ಇದರಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುವಂತಾಗಿದೆ. ವಾರದ ಹಿಂದೆ ನಂತೂರಿನಲ್ಲಿ ಲಾರಿಯೊಂದು ನಿಂತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದರು.


ಸಿಟಿ ಬಸ್‌ಗಳ ಧಾವಂತಕ್ಕೆ ಕಡಿವಾಣ ಅವಶ್ಯ: ನಗರದಲ್ಲಿ ಸಿಟಿ ಬಸ್‌ಗಳ ಧಾವಂತ ಹೆಚ್ಚಾಗಿದ್ದು, ಕರ್ಕಶ ಹಾರ್ನ್ ಬಳಸಿ ಅತಿ ವೇಗವಾಗಿ, ನಿರ್ಲಕ್ಷೃದಿಂದ ಚಲಾಯಿಸುವುದು ಸಾಮಾನ್ಯವಾಗಿದೆ. ಅವರನ್ನು ಪ್ರಶ್ನಿಸಿದರೆ ಹಲ್ಲೆಗೆ ಮುಂದಾಗುತ್ತಿದ್ದಾರೆ. ಸಂಚಾರಿ ಪೊಲೀಸರು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಅಪಘಾತ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ. ಹೆಚ್ಚಿನ ಪ್ರಕರಣಗಳಲ್ಲಿ ಅಮಾಯಕ ದ್ವಿಚಕ್ರ ಸವಾರರೇ ಬಸ್‌ಗಳ ಅಡಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿರುವುದು ದುರಂತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net