ಜಲ್ಲಿ ಕ್ರಷರ್​ ನಿಲ್ಲಿಸಲು ಪಟ್ಟು

ಜಲ್ಲಿ ಕ್ರಷರ್​ ನಿಲ್ಲಿಸಲು ಒತ್ತಾಯಿಸಿ ಚಿಕ್ಕಬಳ್ಳಾಪುರ ತಾಲೂಕಿನ ಜನ್ನಲಕುಂಟೆ ಬಳಿ ರೈತರು ಟಿಪ್ಪರ್​ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು.
Jalli Krusher Nillisalu pattu
Published on

ಜನ್ನಲಕುಂಟೆಯಲ್ಲಿ ಟಿಪ್ಪರ್​ ಲಾರಿ ತಡೆದು ರೈತರ ಆಕ್ರೋಶ

ವಿಜಯವಾಣಿ ಸುದ್ದಿಜಾಲ ಗುಡಿಬಂಡೆ (ಪೆರೇಸಂದ್ರ)
ಜಲ್ಲಿ ಕ್ರಷರ್​ಗಳಿಂದ ಬರುವ ಧೂಳಿನಿಂದ ಜಮೀನಿನಲ್ಲಿ ಬೆಳೆ ಬೆಳೆಯಲು ಆಗುತ್ತಿಲ್ಲ, ಕ್ರಷರ್​ನವರು ರೈತರಿಗೆ ಯಾವುದೇ ನಷ್ಟಪರಿಹಾರ ನೀಡುತ್ತಿಲ್ಲ. ತಕ್ಷಣ ಜಲ್ಲಿ ಕ್ರಷರ್​ ಕಾರ್ಯ ನಿಲ್ಲಿಸಬೇಕು ಎಂದು ಒತ್ತಾಯಿಸಿ ಹಿರೇನಾಗವಲ್ಲಿ ಗ್ರಾಮದ ರೈತರು ಗುರುವಾರ ಟಿಪ್ಪರ್​ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಹೈನುಗಾರಿಕೆ ಮಾಡೋಣ ಎಂದರೆ ಮೇವಿನ ತುಂಬಾ ಧೂಳು ಕುಳಿತುಕೊಳ್ಳುತ್ತಿದ್ದು, ಹಸುಗಳಿಗೆ ಮೇವು ಸಿಗುತ್ತಿಲ್ಲ. ಇನ್ನು ನಾವು ಹೇಗೆ ಜೀವನ ಮಾಡುವುದು, ಜಲ್ಲಿ ಕ್ರಷರ್​ ಕಾರ್ಯವನ್ನಾದರೂ ನಿಲ್ಲಿಸಿ, ಇಲ್ಲವೇ ರೈತರಿಗೆ ನಷ್ಟದ ಪರಿಹಾರವನ್ನಾದರೂ ಕೊಡಿ ಎಂದು ಪ್ರತಿಭಟನಾನಿರತ ರೈತರು ಆಗ್ರಹಿಸಿದರು.
ರೈತ ಎಚ್​.ಜಿ.ಜಯಪ್ಪ ಮಾತನಾಡಿ, ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲು ಹೋಬಳಿ ವ್ಯಾಪ್ತಿಯ ಜನ್ನಲಕುಂಟೆ ಗ್ರಾಮದ ಸರ್ವೇ ನಂ.22/1 ಮತ್ತು 22/2ರಲ್ಲಿ 2-29 ಎಕರೆ ಹಾಗೂ 22ರಲ್ಲಿ 31 ಗುಂಟೆ ಜಮೀನಿದ್ದು, ಈ ಜಮೀನಿನಲ್ಲಿ ಅರ್ಧ ಭಾಗ ಸೀಬೆ ಗಿಡಗಳು ಮತ್ತು ಉಳಿಕೆ ಜಾಗದಲ್ಲಿ ಶೇಂಗಾ ಮತ್ತು ರಾಗಿ ಬೆಳೆ ಹಾಕಿದ್ದೇನೆ. ಆದರೆ ನಮ್ಮ ಜಮೀನಿನ ಪಕ್ಕದಲ್ಲೆ ಮೂರು ಕ್ರಷರ್​ಗಳು ತಲೆ ಎತ್ತಿದ್ದು, ಇದರಿಂದ ಬರುವ ಧೂಳಿನಿಂದ ನಾವು ಬೆಳೆಯುತ್ತಿರುವ ಬೆಳೆ ಸಂಪೂರ್ಣ ನಾಶವಾಗಿವೆ. ನನಗೆ ಆಗಿರುವ ನಷ್ಟದ ಬಗ್ಗೆ 2022 ಡಿಸೆಂಬರ್​ನಲ್ಲಿ ಜಿಲ್ಲಾಧಿಕಾರಿ, ಭೂ ವಿಜ್ಞಾನ ಅಭಿವೃದ್ಧಿ ಇಲಾಖೆ ಹಾಗೂ ಉಪವಿಭಾಗಾಧಿಕಾರಿಗೆ ನಷ್ಟ ಪರಿಹಾರ ಕೋರಿ ಮನವಿ ಸಲ್ಲಿಸಿದರು ಏನೂ ಪ್ರಯೋಜನವಾಗಿಲ್ಲ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ನಮ್ಮ ದೂರಿನ ಮೇಲೆ ಸ್ಥಳ ತನಿಖೆಗೆ ಬಂದರೆ ಎಲ್ಲ ಕ್ರಷರ್​ ಮಾಲೀಕರ ಪರವಾಗಿ ವರದಿ ಸಿದ್ಧಪಡಿಸಿ ಮೇಲಧಿಕಾರಿಗೆ ನೀಡುತ್ತಾರೆ. ಇನ್ನು ನ್ಯಾಯ ಕೊಡಿಸುವುದಾದರೂ ಯಾರು, ಈ ಭಾಗದ ರೈತರು ಶುದ್ಧ ಗಾಳಿ ಸೇವನೆ ಮಾಡಲು ಆಗುತ್ತಿಲ್ಲ, ಪ್ರತಿದಿನ ಧೂಳನ್ನು ಸೇವನೆ ಮಾಡಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜನ್ನಲಕುಂಟೆ ಗ್ರಾಮದ ರೈತ ಶಿವಪ್ಪ ಮಾತನಾಡಿ, ಹಳ್ಳಿಗಳಲ್ಲಿ ಜಾನುವಾರಗಳನ್ನು ಮೇಯಿಸಲು ಜಾಗವಿಲ್ಲ. ಕ್ರಷರ್​ ಮಾಲೀಕರು ಕೆರೆಯನ್ನು ಒತ್ತುವರಿ ಮಾಡಿಕೊಂಡು ಅವರಿಗೆ ಬೇಕಾದಂತೆ ರಸ್ತೆಗಳನ್ನು ನಿರ್ಮಿಸಿಕೊಂಡಿದ್ದಾರೆ ಮತ್ತು ಕ್ರಷರ್​ಗಳಿಂದ ಬರು ಧೂಳಿನ ನೀರನ್ನು ಕೆರೆಗೆ ಬಿಡುತ್ತಿದ್ದಾರೆ. ನಾವು ಬೆಳೆಯುತ್ತಿರುವ ಬೆಳೆಗಳು ಸಂಪೂರ್ಣವಾಗಿ ನಾಶ ಆಗುತ್ತಿವೆ. ಯಾವುದೇ ಸರ್ಕಾರ ಇರಲಿ, ಯಾವ ಅಧಿಕಾರಿಯೇ ಇರಲಿ ಮೊದಲು ರೈತರು ಬದುಕಲು ಅವಕಾಶ ಮಾಡಿಕೊಡಿ ಎಂದು ಒತ್ತಾಯಿಸಿದರು.
ರೈತರು ಟಿಪ್ಪರ್​ ಲಾರಿಗಳನ್ನು ತಡೆದು ಪ್ರತಿಭಟನೆ ಮಾಡುತ್ತಿದ್ದಂತೆ ಪೆರೇಸಂದ್ರ ಪೊಲೀಸ್​ ಠಾಣೆಯ ಎಎಸ್​ಐ ಮುರಳಿ, ಪೇದೆಗಳಾದ ಕರಿಬಾಬು, ಬಾಬಾಜಾನ್​ ಸೇರಿದಂತೆ ಅಪಾರ ಪೊಲೀಸ್​ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶ್ರೀದಲ್ಲಿ ಸಮಸ್ಯೆ ಪರಿಹರಿಸುತ್ತೇವೆ. ಪ್ರತಿಭಟನೆ ಹಿಂಪಡೆಯಿರಿ ಎಂದು ಮಾಡಿದ ಮನವಿ ಮೇರೆಗೆ ಪ್ರತಿಭಟನಾ ನಿರತ ರೈತರು ಪ್ರತಿಭಟನೆ ಹಿಂಪಡೆದರು. ರೈತರಾದ ಲಕ್ಷಿ$್ಮನಾರಾಯಣಪ್ಪ, ಜಯಪ್ಪ, ಶಿವಪ್ಪ, ಮಂಜುನಾಥ್​, ಅಶ್ವತ್ಥಪ್ಪ, ಆನಂದ, ಪ್ರಕಾಶ್​ ಸೇರಿದಂತೆ ಅಪಾರ ರೈತರು ಪಾಲ್ಗೊಂಡಿದ್ದರು.


ಮೊದಲು ದೇಶಕ್ಕೆ ಅನ್ನ ನೀಡುವ ಅನ್ನದಾತನನ್ನು ಬದುಕಿಸಿ, ಕೇವಲ ದುಡ್ಡಿನಿಂದ ಮನುಷ್ಯ ಬದುಕಲು ಸಾಧ್ಯವಿಲ್ಲ. ರೈತರನ್ನು ಉಳಿಸುವ ಕೆಲಸ ಸರ್ಕಾರ ಮತ್ತು ಅಧಿಕಾರಿಗಳು ಮಾಡಬೇಕಾಗಿದೆ. ಈಗಾಗಲೇ ನಾವು ಅನೇಕ ಬಾರಿ ನಮಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಕ್ರಷರ್​ ಮಾಲೀಕರಿಗೆ ಹೇಳುತಿದ್ದೇವೆ. ಆದರೆ, ಅವರು ನಮ್ಮ ಮಾತನ್ನು ಕೇಳಿಸಿಕೊಳ್ಳುತ್ತಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ನಮಗೆ ನ್ಯಾಯ ಕೊಡಿಸಬೇಕು.

  • ಶಿವಪ್ಪ, ರೈತ, ಜನ್ನಲಕುಂಟೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net