

ಕುಷ್ಟಗಿ: ತಾಲೂಕಿನ ಬೆನಕನಾಳ ಗ್ರಾಮದಲ್ಲಿ ಫೆ.19ರಂದು ‘ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿ ಕಡೆಗೆ’ (ಅಧಿಕಾರಿಗಳ ಗ್ರಾಮವಾಸ್ತವ್ಯ) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಎಂ.ಸಿದ್ದೇಶ ತಿಳಿಸಿದರು. ತಹಸಿಲ್ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ವಿವಿಧ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ವಿವಿಧ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗಳ ಪಟ್ಟಿ ಮಾಡಬೇಕು. ಕಂದಾಯ ಇಲಾಖೆ, ಪಂಚಾಯತ್‌ರಾಜ್ ಹಾಗೂ ಸರ್ವೇ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚಿನ ಆದ್ಯತೆ ನೀಡಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳಬೇಕಿರುವುದರಿಂದ ಎಲ್ಲ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತೀರ್ಣಾಧಿಕಾರಿ ಶ್ರೀನಿವಾಸ ನಾಯಕ್, ಸಿಡಿಪಿಒ ಅಮರೇಶ ಹಾವಿನ್, ಜೆಸ್ಕಾಂ ಉಪ ವಿಭಾಗದ ಎಇಇ ಮಂಜುನಾಥ ಇತರರಿದ್ದರು.