

ಬೆಂಗಳೂರು: ಕುಡಿದು ಬಂದು ಹಲ್ಲೆ ಮಾಡುತ್ತಿದ್ದ ಪತಿಯ ಕಿರುಕುಳಕ್ಕೆ ಬೇಸತ್ತ ಮಹಿಳೆ ಆತನ ಮುಖಕ್ಕೆ ಕುದಿಯುತ್ತಿದ್ದ ಅಡುಗೆ ಎಣ್ಣೆ ಎರಚಿದ್ದಾಳೆ.
ಯಶವಂತಪುರದ ಮೋಹನ್ಕುಮಾರ್ ನಗರದ ಮಂಜುನಾಥ್ (40) ದಾಳಿಗೆ ಒಳಗಾದವರು. ಕೃತ್ಯ ಎಸಗಿದ ಪತ್ನಿ ಪದ್ಮಾಳನ್ನು (36) ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮಂಜುನಾಥ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದೇಹದ ಶೇ.50 ಭಾಗ ಸುಟ್ಟಿದ್ದು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಯಶವಂತಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಭಾನುವಾರ (ಫೆ.9) ಬೆಳಗ್ಗೆ ಪದ್ಮ ಮನೆಯಲ್ಲಿ ಅಡುಗೆ ಮಾಡುತ್ತಿದ್ದಳು.ಆಗ ಕುಡಿದು ಬಂದಿದ್ದ ಮಂಜುನಾಥ ಗಲಾಟೆ ತೆಗೆದಿದ್ದ. ಅಲ್ಲದೆ, ಅಡುಗೆ ಸೌಟಿನಿಂದ ಹಲ್ಲೆ ಮಾಡಿದ್ದ. ಇದೇ ಸಿಟ್ಟಿನಲ್ಲಿ ಒಲೆ ಮೇಲೆ ಕುದಿಯುತ್ತಿದ್ದ ಅಡುಗೆಎಣ್ಣೆಯನ್ನು ತೆಗೆದು ಪತಿ ಮುಖಕ್ಕೆ ಪದ್ಮ ಎರಚಿದ್ದಾಳೆ.
ಮಂಜುನಾಥ ಮತ್ತು ಪದ್ಮ 9 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ಮಂಜುನಾಥ್ ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ಪ್ರತಿನಿತ್ಯ ಕುಡಿದು ಬಂದು ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದ. ಅಲ್ಲದೆ, ಸಂಬಂಧಿಕರು ಸಹ ಅನುಮಾನಿಸುತ್ತಿದ್ದರು. ಪತಿ ಎಲ್ಲಿ
ಕೆಲಸ ಮಾಡುತ್ತಾನೆ. ಮನೆ ಖರ್ಚಿಗೆ ಹಣ ಎಲ್ಲಿಂದ ಬರುತ್ತೆ ಎಂದು ಪ್ರಶ್ನಿಸುತ್ತಿದ್ದರು ಎನ್ನಲಾಗಿದೆ. ಇದರಿಂದಾಗಿ ಖಿನ್ನತೆಗೆ ಒಳಗಾಗಿದ್ದ ಪದ್ಮ ನಿಮ್ಹಾನ್ಸ್ನಲ್ಲಿ ಚಿಕಿತ್ಸೆ ಪಡೆದಿದ್ದಳು. ಪತಿಯ ಕಾಟದಿಂದ ಬೇಸತ್ತು ಈ ಕೃತ್ಯ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.