ಬೇಸಿಗೆಯಲ್ಲೂ ಬೇಮುಲ್ ಕ್ಷೀರಕ್ರಾಂತಿ!

Screenshot_2024-04-02-14-37-43-91.jpg
Published on

ಜಗದೀಶ ಹೊಂಬಳಿ ಬೆಳಗಾವಿ

ಬಿಸಿಲಿನ ತಾಪದಿಂದಾಗಿ ಮೇವು ಮತ್ತು ನೀರಿನ ಕೊರತೆ ಉಂಟಾಗಿ ರೈತರು ಹೈನುಗಾರಿಕೆ ಮಾಡಲು ಸಂಕಷ್ಟ ಎದುಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು-ಉತ್ಪಾದಕರ ಸಂಘಗಳ ಒಕ್ಕೂಟ (ಬೆಮುಲ್)ದಲ್ಲಿ ಹಾಲು ಸಂಗ್ರಹ ಪ್ರಮಾಣ ಕಳೆದ ವರ್ಷಕ್ಕಿಂತಲೂ ಹೆಚ್ಚಾಗಿದೆ.

20230 ಮಾರ್ಚ್‌ನಲ್ಲಿ ಪ್ರತಿದಿನ 1.61 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿತ್ತು. ಪ್ರಸಕ್ತ ವರ್ಷದ ಮಾರ್ಚ್ ತಿಂಗಳಲ್ಲಿ ಪ್ರತಿದಿನ 1.91 ಲಕ್ಷ ಲೀಟರ್ ಹಾಲು ಸಂಗ್ರಹವಾಗಿದ್ದು, ಬೇಸಿಗೆ ಮಧ್ಯೆಯೂ ಶೇ. 20ರಷ್ಟು ಹಾಲು ಉತ್ಪಾದನೆ ಹೆಚ್ಚಾಗಿದೆ. ಬೆಳಗಾವಿ ಹಾಗೂ ರಾಯಬಾಗ ತಾಲೂಕುಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಹಾಲು ಸಂಗ್ರಹವಾಗುತ್ತಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಒಕ್ಕೂಟಕ್ಕೆ 29 ಸಾವಿರ ಹಾಲು ನೀಡುವ ಸದಸ್ಯರಿದ್ದರು. ಪ್ರಸಕ್ತ ಅವರ ಸಂಖ್ಯೆ 33 ಸಾವಿರಕ್ಕೇರಿದೆ.

ಖಾಸಗಿ ಹಾಲಿನ ಡೇರಿಗಳು ನಷ್ಟದಲ್ಲಿದ್ದು, ರೈತರಿಂದ ಹಾಲು ಶೇಖರಣೆ ಮಾಡುತ್ತಿಲ್ಲ. ಶೇಖರಣೆ ಮಾಡಿದರೂ ಸರಿಯಾಗಿ ಹಣ ಸಂದಾಯ ಮಾಡುತ್ತಿಲ್ಲ. ಹೀಗಾಗಿ ರೈತರು ಬೆಮುಲ್‌ಗೆ ಹಾಲು ನೀಡುತ್ತಿರುವುದರಿಂದ ಹಾಲು ಶೇಖರಣೆ ಪ್ರಮಾಣ ಹೆಚ್ಚಾಗಿದೆ. ಬೆಮುಲ್‌ನಲ್ಲಿ ಸಂಗ್ರಹವಾಗುತ್ತಿರುವ ಹೆಚ್ಚಿನ ಪ್ರಮಾಣದ ಹಾಲು

ಶೇ. 93ರಷ್ಟು ಗುಣಮಟ್ಟದ್ದಾಗಿದೆ. ಹೀಗಾಗಿ ಪ್ರತಿದಿನ ಗುಣಮಟ್ಟದ ಹಾಲು ನೀಡುತ್ತಿರುವ ಒಕ್ಕೂಟದ ಸದಸ್ಯರಿಗೆ ಪ್ರತಿದಿನ ಸರ್ಕಾರದಿಂದ 2.5 ಕೋಟಿ ರೂ. ಪ್ರೋತ್ಸಾಹ ಧನ ಕೊಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಜಾನುವಾರುಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ, ಹಾಲು ನೀಡುವ ಹಸುಗಳ ಸಂಖ್ಯೆ ಅಷ್ಟೇನು ಕಡಿಮೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

5 ಲಕ್ಷ ಲೀ. ಹಾಲು ಸಂಗ್ರಹ ಗುರಿ:

ಜಿಲ್ಲಾ ಸಹಕಾರಿ ಹಾಲು-ಉತ್ಪಾದಕರ ಸಂಘಗಳ ಒಕ್ಕೂಟವು ಪ್ರತಿದಿನ 5 ಲಕ್ಷ ಲೀಟರ್ ಹಾಲು ಸಂಗ್ರಹ ಗುರಿ ಹಾಕಿಕೊಂಡಿದೆ. ಇದಕ್ಕೆ ತಕ್ಕಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಹೆಚ್ಚಿಸುವ ಯೋಜನೆ ಇದೆ. ಸದ್ಯ 650 ಹಾಲು ಉತ್ಪಾದಕರ ಸಹಕಾರಿ ಸಂಘಗಳಿವೆ. ಇವುಗಳನ್ನು 1000ಕ್ಕೇರಿಸುವ ಗುರಿ ಹಾಕಿಕೊಳ್ಳಲಾಗಿದೆ. ಮಾರುಕಟ್ಟೆ ಸುಧಾರಣೆಯ ಹಲವು ಯೋಜನೆಗಳೂ ಒಕ್ಕೂಟದ ಮುಂದಿದೆ.

ಹಸಿ ಮೇವು ಕೊರತೆ:

ಬಿಸಿಲಿನ ತಾಪಮಾನದಿಂದಾಗಿ ಜಾನುವಾರುಗಳಲ್ಲಿ ನೀರಿನಾಂಶ ಕಡಿಮೆಯಾಗುತ್ತಿದೆ. ಹಸಿ ಮೇವು ಇಲ್ಲದಿರುವುದು ಹಾಲಿನ ಪ್ರಮಾಣ ತಗ್ಗುತ್ತಿದೆ. ರೈತರು ಪ್ರಸ್ತುತ ಸಾಕಣೆ ಮಾಡುತ್ತಿರುವ ಹಸುಗಳು ತಂಪಾದ ವಾತಾವರಣಕ್ಕೆ ಹೊಂದಿಕೊಳ್ಳುತ್ತವೆ. ಹೀಗಾಗಿ ಹೆಚ್ಚಾಗಿ ಹಸಿ ಮೇವು ನೀಡಿದರೆ ಹಾಲಿನ ಪ್ರಮಾಣ ಇಳಿಕೆ ಆಗುವುದನ್ನು ತಡೆಯಬಹುದು. ಬೇಸಿಗೆಯಲ್ಲಿ ಹಸಿ ಮೇವು ಸಿಗದಂತಾಗಿದೆ. ಒಣ ಮೇವಿಗೆ ಅವಲಂಬಿತರಾಗಿದ್ದಾರೆ. ಆದರೆ, ಒಣ ಮೇವಿನಲ್ಲಿ ಪೋಷಕಾಂಶ ಅಷ್ಟಾಗಿ ಇರುವುದಿಲ್ಲ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net