ಬೆಮೆಲ್ ಖಾಸಗೀಕರಣಕ್ಕೆ ವಿರೋಧ ; ನಿವೃತ್ತ ನೌಕರರಿಂದ ಬೈಕ್ ರ‌್ಯಾಲಿ

12-klr-4
Published on

ಕೋಲಾರ : ಜಿಲ್ಲೆಯ ಸಾರ್ವಜನಿಕ ಉದ್ದಿಮೆ ಬೆಮೆಲ್ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಬೆಮೆಲ್ ನಿವೃತ್ತ ನೌಕರರು ಕೆಜಿಎಫ್ ನಗರದಿಂದ ಜಿಲ್ಲಾಧಿಕಾರಿ ಕಚೇರಿಯವರಗೆ ಶುಕ್ರವಾರ ಬೈಕ್ ರ‌್ಯಾಲಿ ನಡೆಸಿ ಪ್ರತಿಭಟಿಸಿದರು.

ಕೆಜಿಎಫ್ ನಗರದ ಬೆಮೆಲ್ ಮುಂಭಾಗದಿಂದ ಬೆಳಗ್ಗೆ ಬೈಕ್ ರ‌್ಯಾಲಿ ಹೊರಟ ನಿವೃತ್ತ ಕಾರ್ಮಿಕರು ಬೆಮೆಲ್ ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಘೋಷಣೆ ಕೂಗಿ ಸಾರ್ವಜನಿಕ ಉದ್ದಿಮೆ ಉಳಿಸುವಂತೆ ಒತ್ತಾಯಿಸಿದರು. ಬೆಮೆಲ್ ನಿವೃತ್ತ ಕಾರ್ಮಿಕ ಜಿ.ಅರ್ಜುನನ್ ಮಾತನಾಡಿ, ದೇಶಾದ್ಯಂತ ಮಾರಾಟ ಜಾಲ ಹೊಂದಿ ಉತ್ಕೃಷ್ಟ ಸೇವೆ ನೀಡುತ್ತಿರುವ ಬೆಮೆಲ್ ಸಂಸ್ಥೆಯನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡಲು ಮುಂದಾಗಿದೆ. ಈ ನಿರ್ಧಾರ ಕೈಬಿಡಬೇಕು ಎಂದು ಒತ್ತಾಯಿಸಿದರು.

ಬೆಮೆಲ್ ಲಾಭದಾಯಕವಾಗಿ ನಡೆಯುತ್ತಿದ್ದು, ಕೇಂದ್ರ ಸರ್ಕಾರಕ್ಕೆ ತೆರಿಗೆ ಹಾಗೂ ಲಾಭಾಂಶ ರೂಪದಲ್ಲಿ ಸಾವಿರಾರು ಕೋಟಿ ರೂ. ನೀಡುವ ಜತೆಗೆ ಷೇರುದಾರರಿಗೆ ಪ್ರತಿವರ್ಷ ಡಿವಿಡೆಂಡ್ ಪಾವತಿಸುತ್ತಾ ದೇಶದ ಪ್ರಗತಿಗೆ ಕೊಡುಗೆ ನೀಡುತ್ತಿದೆ. ಸದ್ಯ ಬೆಮೆಲ್ ಸಂಸ್ಥೆಯಲ್ಲಿ ಕೇಂದ್ರ ಸರ್ಕಾರ ಶೇ.54.03 ಷೇರು ಬಂಡವಾಳ ಹೊಂದಿದ್ದು, 2016ರ ನವೆಂಬರ್‌ನಲ್ಲಿ ಕೇಂದ್ರ ಸಚಿವ ಸಂಪುಟದ ಅನುಮೋದನೆ ಮೇರೆಗೆ ಶೇ.26 ಷೇರನ್ನು ಖಾಸಗಿಯವರಿಗೆ ಮಾರಾಟ ಮಾಡುವ ಪ್ರಕ್ರಿಯೆ ಆರಂಭಿಸಿ, ಅದರ ಮುಂದುವರಿದ ಭಾಗವಾಗಿ ಸಂಸ್ಥೆಯ ಆಡಳಿತ ನಿರ್ವಹಣೆ ಖಾಸಗಿಯವರಿಗೆ ವಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ಖಾಸಗಿ ಕಾರ್ಪೋರೇಟ್ ಸಂಸ್ಥೆಗಳಿಗೆ ಮಣೆ ಹಾಕಲು ಹೊರಟಿರುವ ಕೇಂದ್ರ ಸರ್ಕಾರದ ನಡೆ ಖಂಡನಾರ್ಹ. ಸರ್ಕಾರದ ಇಂತಹ ನಿಲುವಿನಿಂದ ದೇಶದ ಸಮಗ್ರತೆ, ಭದ್ರತೆಗೆ ಧಕ್ಕೆಯಾಗುವ ಜತೆಗೆ ದೇಶದ ಅಭಿವೃದ್ಧಿಗೆ ಮಾರಕ, ಉದ್ಯೋಗ ಭದ್ರತೆಗೆ ಧಕ್ಕೆ ಉಂಟಾಗಲಿದೆ. ಮೀಸಲಾತಿ ಆಧಾರದ ನೇಮಕ ಪ್ರಕ್ರಿಯೆ ಸ್ಥಗಿತಗೊಂಡು ಸಾಮಾಜಿಕ ನ್ಯಾಯ ಮರೀಚಿಕೆಯಾಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಸಂಸ್ಥೆಯನ್ನು ಖಾಸಗೀಕರಣ ಮಾಡಬಾರದು ಎಂದರು.

ಬೆಮೆಲ್ ನಿವೃತ್ತ ನೌಕರರಾದ ಆರ್.ರಾಜಶೇಖರನ್, ವಿ.ಮುನಿರತ್ನಂ, ಅಶೋಕ್ ಲೋನಿ, ಆರ್.ಶ್ರೀನಿವಾಸ್, ಜಯಶೀಲನ್, ಟಿ.ಎಂ.ವೆಂಕಟೇಶ್, ಎನ್.ಎನ್.ಶ್ರೀರಾಮ್, ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಅ.ಕೃ.ಸೋಮಶೇಖರ್, ಜೆಎಂಎಸ್ ವಿಜಯಕುಮಾರಿ, ಆಶಾ, ಭೀಮರಾಜ್, ನಾರಾಯಣರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net