ಬೆಂಬಳೂರು ಬಾಣಂತಮ್ಮ ಜಾತ್ರಾ ಮಹೋತ್ಸವ ಸಂಪನ್ನ

16ss1Banatamma palaki mervanige
ಬಾಣಂತಮ್ಮ ದೇವಸ್ಥಾನದಿಂದ ಜಾತ್ರಾ ಮೈದಾನಕ್ಕೆ ಅಡ್ಡಪಲ್ಲಕ್ಕಿಯಲ್ಲಿ ದೇವರನ್ನು ಕರೆತರಲಾಯಿತು.
Published on

ಶನಿವಾರಸಂತೆ: ಸಮೀಪದ ಬ್ಯಾಡಗೊಟ್ಟ ಗ್ರಾಪಂ ವ್ಯಾಪ್ತಿಯ ಬೆಂಬಳೂರು ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಗ್ರಾಮೀಣ ಸೊಗಡು ಹಿನ್ನೆಲೆಯ ತಾಯಿ ಶ್ರೀ ಬಾಣಂತಮ್ಮ ಮತ್ತು ಪುತ್ರ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಜಾತ್ರಾ ಮಹೋತ್ಸವ ಸಾಂಪ್ರದಾಯಿಕವಾಗಿ ವಿಜೃಂಬಣೆಯಿಂದ ಮಂಗಳವಾರ ಸಂಪನ್ನಗೊಂಡಿತು.

ಬಾಣಂತಮ್ಮ ಮತ್ತು ಕುಮಾರಲಿಂಗೇಶ್ವರ ಜಾತ್ರೋತ್ಸವದ ಅಂಗವಾಗಿ ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೆ ಗ್ರಾಮದಲ್ಲಿ ದವಸ, ಧಾನ್ಯ, ಹಣ್ಣು, ತರಕಾರಿ ಸಂಗ್ರಹಿಸಿದರು. ಸಂಜೆ 5 ರಿಂದ ರಾತ್ರಿ 8 ಗಂಟೆಯ ತನಕ ಶ್ರೀ ಬಾಣಂತಮ್ಮ, ಶ್ರೀ ಕುಮಾರಲಿಂಗೇಶ್ವರ ದೇವರಿಗೆ ಗಂಗಾಸ್ಥಾನ, ಅಡುಗೆ ಒಲೆ ಪೂಜೆ ನಂತರ ರಾತ್ರಿ 9.30 ಗಂಟೆಯಿಂದ ಸಾಂಪ್ರದಾಯಿಕ ಮಡೆ ಪೂಜೆ ಮಾಡಲಾಯಿತು. ನಂತರ ಗ್ರಾಮಸ್ಥರು ಮತ್ತು ಭಕ್ತಾಧಿಗಳೊಡಗೂಡಿ ಮೆರವಣಿಗೆಯಲ್ಲಿ ಮಡೆಯನ್ನು ಅಡುಗೆ ಒಲೆ ಹತ್ತಿರ ಕೊಂಡೊಯ್ಯಲಾಯಿತು.

ಮಂಗಳವಾರ ನಡೆದ ಶ್ರೀ ಬಾಣತಮ್ಮ, ಶ್ರೀ ಕುಮಾರಲಿಂಗೇಶ್ವರ ಪೂಜಾ ಮಹೋತ್ಸವ ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಗ್ರಾಮದ ಶ್ರೀ ಬಾಣಂತಮ್ಮ ದೇವಸ್ಥಾನದಲ್ಲಿ ತಾಯಿ ಬಾಣಂತಮ್ಮ, ಪುತ್ರ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜಾ ವಿಧಿ ವಿಧಾನ ನೆರವೇರಿಸಿದರು. ನಂತರ ಬೆಳಗ್ಗೆ 9 ಗಂಟೆಗೆ ತಾಯಿ ಶ್ರೀ ಬಾಣಂತಮ್ಮ ದೇವರನ್ನು ಅಡ್ಡಪಲ್ಲಕ್ಕಿಯಲ್ಲಿ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಮೂಲಕವಾಗಿ ಬಾಣಂತಮ್ಮ ಜಾತ್ರಾ ಮೈದಾನಕ್ಕೆ ಕರೆತರಲಾಯಿತು. ನಂತರ ದೇವರನ್ನು ಭಕ್ತಾದಿಗಳ ದರ್ಶನಕ್ಕಾಗಿ ಗುಡಿಯಲ್ಲಿ ಇರಿಸಲಾಯಿತು. ಮಧ್ಯಾಹ್ನ 12 ಗಂಟೆವರೆಗೆ ಬಾಣಂತಮ್ಮಳ ಜಾತ್ರೋತ್ಸವ ಮತ್ತು ಭಕ್ತಾದಿಗಳಿಂದ ಪೂಜೆ ನಡೆಯಿತು. ಮಧ್ಯಾಹ್ನ 12 ಗಂಟೆಗೆ ಜಾತ್ರಾ ಮೈದಾನದ ಗುಡಿಯಲ್ಲಿಟ್ಟಿದ ದೇವರನ್ನು ಮೂಲ ಸ್ಥಾನದ ಬಾಣಂತಮ್ಮ ದೇವಸ್ಥಾನಕ್ಕೆ ಕರೆತರಲಾಯಿತು.

ಮಧ್ಯಾಹ್ನ 1 ಗಂಟೆಯಿಂದ ಪುತ್ರ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ ಜಾತ್ರೋತ್ಸವದ ಹಿನ್ನೆಲೆ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಶ್ರೀ ಕುಮಾರಲಿಂಗೇಶ್ವರ ದೇವರನ್ನು ದೇವಸ್ಥಾನದಿಂದ ಅಡ್ಡಪಲ್ಲಕ್ಕಿಯಲ್ಲಿ ವಾದ್ಯಗೋಷ್ಠಿ ಮೆರವಣಿಗೆ ಮೂಲಕ ಕುಮಾರಲಿಂಗೇಶ್ವರನ ಜಾತ್ರಾ ಮೈದಾನದಲ್ಲಿರುವ ಗುಡಿಗೆ ಕರೆತರಲಾಯಿತು. ಅಲ್ಲಿ ಭಕ್ತಾದಿಗಳು ಪೂಜೆ ಸಲ್ಲಿಸಿ ಈಡುಗಾಯಿ ಒಡೆಯುವ ಮೂಲಕ ಹರಕೆ ಸಲ್ಲಿಸಿದರು. ಸಂಜೆ 5.30ರವರಗೆ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ನಡೆಯಿತು.

ಸಂಜೆ 6 ಗಂಟೆಗೆ ಶ್ರೀ ಕುಮಾರಲಿಂಗೇಶ್ವರ ದೇವರನ್ನು ಮೂಲ ಸ್ಥಾನವಾದ ದೇವಸ್ಥಾನಕ್ಕೆ ಕರೆತಂದು ದೇವಸ್ಥಾನದಲ್ಲಿ ಇಡುವ ಮೂಲಕ ಶ್ರೀ ಬಾಣಂತಮ್ಮ ದೇವಿ ಮತ್ತು ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತ್ತು. ಜಾತ್ರಾ ಮಹೋತ್ಸವದಲ್ಲಿ ಬೆಂಬಳೂರು, ಶಿವರಳ್ಳಿ, ಊರುಗುತ್ತಿ, ಮೂದರವಳ್ಳಿ ಗ್ರಾಮಗಳು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳು, ಹೊರ ಜಿಲ್ಲೆಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಹರಕೆ ಸಲ್ಲಿಸಿದ ಮಹಿಳಾ ಭಕ್ತಾದಿಗಳು ಗ್ರಾಮದ ಶ್ರೀ ಬಾಣಂತಮ್ಮ ಕೆರೆಗೆ ಬಾಗಿನ ಅರ್ಪಿಸುವ ಮೂಲಕ ಹರಕೆ ಸಲ್ಲಿಸಿದರು. ದೇವಸ್ಥಾನ ಸಮಿತಿಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಜಾತ್ರೋತ್ಸವದಲ್ಲಿ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಸದಸ್ಯರು, ಮಾಜಿ ಅಧ್ಯಕ್ಷರು, ಸದಸ್ಯರು, ಗ್ರಾಮದ ಪ್ರಮುಖರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net