ಅನಧಿಕೃತ ವಿದ್ಯುತ್ ಸಂಪರ್ಕ ಕಡಿತ : ಬೆಳುವಾಯಿ ಗ್ರಾಮಸಭೆಯಲ್ಲಿ ನಿರ್ಣಯ : ಬಿಲ್ ಕಲೆಕ್ಟರ್ ಸಂಬಳ ಕುರಿತು ಚರ್ಚೆ

New Project (43)
Published on

ಮೂಡುಬಿದಿರೆ: ಪಂಚಾಯಿತಿ ಕಚೇರಿ ಮುಂಭಾಗದಲ್ಲಿರುವ ಅನಧಿಕೃತ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ನೀಡಲಾಗಿದ್ದು, ವಾರದೊಳಗೆ ಕಡಿತಗೊಳಿಸದಿದ್ದರೆ ಮೆಸ್ಕಾಂ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ಬೆಳುವಾಯಿ ಗ್ರಾಮಸಭೆಯಲ್ಲಿ ನಿರ್ಣಯಿಸಲಾಯಿತು.

ಹರೀಶ್ ಸುವರ್ಣ ಎಂಬುವರ ಮನೆ ನಂಬರ್ ಮತ್ತು ದಾಖಲೆ ಬಳಸಿಕೊಂಡು ಚಂದ್ರಶೇಖರ್ ಎಂಬುವರು ಅನಧಿಕೃತವಾಗಿ ಕಟ್ಟಡ ನಿರ್ಮಿಸಿ ಮೆಸ್ಕಾಂನ ಬೆಳಕು ಯೋಜನೆ ಅಡಿ ವಿದ್ಯುತ್ ಸಂಪರ್ಕ ಪಡೆದುಕೊಂಡಿರುವುದನ್ನು ಪಿಡಿಒ ಭೀಮ ನಾಯಕ್ ಮೆಸ್ಕಾಂನ ಅಕ್ಷರ್ ಪಾಟೀಲ್ ಅವರಲ್ಲಿ ಪ್ರಶ್ನಿಸಿದರು. ಮೆಸ್ಕಾಂ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು. ಒಂದು ವೇಳೆ ಸೂಕ್ತ ಕ್ರಮ ಆಗದಿದ್ದಲ್ಲಿ ಲೋಕಾಯುಕ್ತಕ್ಕೆ ದೂರು ನೀಡುವುದೆಂದು ನಿರ್ಣಯಿಸಲಾಯಿತು.

ಅಧ್ಯಕ್ಷ ಸುರೇಶ್ ಕೆ.ಗೋಲಾರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ನೀರಿನ ಬಿಲ್ ಸಂಗ್ರಾಹಕರ ವಿಚಾರ, ಹೈವೇ ಅಸಮರ್ಪಕ ಕಾಮಗಾರಿ ಸಹಿತ ವಿವಿಧ ಸಮಸ್ಯೆಗಳ ಕುರಿತು ಗ್ರಾಮಸ್ಥರು ಚರ್ಚಿಸಿದರು.

ಪಂಚಾಯಿತಿ ನೀರಿನ ಬಿಲ್ ಸಂಗ್ರಾಹಕಾರ ಸುನೀಲ್ ಎಂಬುವರ ಸಂಬಳ ಕಡಿತ ಕುರಿತಂತೆ ಸದಸ್ಯ ಭರತ್ ಶೆಟ್ಟಿ ಪ್ರಶ್ನಿಸಿದರು. ಈ ವಿಷಯದಲ್ಲಿ ಟಾರ್ಗೆಟ್ ಮಾಡಲಾಗುತ್ತಿದೆ ಎಂಬುದಾಗಿ ಆರೋಪಿಸಿದ ಅವರು, ಸುನೀಲ್ ಅವರ ಸಹೋದರ ಒಂದು ಪಕ್ಷದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಘಟನೆಗೆ ಕಾರಣವಾಗಿದೆ ಎಂದರು. ಕಳೆದ ಗ್ರಾಮಸಭೆಯಲ್ಲಿ ನಡೆಸಲಾದ ನಿರ್ಧಾರ ಕುರಿತಂತೆ ಕಾರ್ಯ ನಿರ್ವಹಿಸಿರುವುದಾಗಿ ಪಿಡಿಒ ತಿಳಿಸಿದರು.

ಬೆಳುವಾಯಿಯ ಕಾನ ಪ್ರದೇಶದಲ್ಲಿ ನಡೆಸಲಾದ ಅಭಿವೃದ್ಧಿ ಕಾಮಗಾರಿಯಲ್ಲಿ ಗುತ್ತಿಗೆದಾರರ ಬಿಲ್ಲನ್ನು ತಡೆ ಹಿಡಿದಿರುವುದರ ಕುರಿತು ಸದಸ್ಯ ಭರತ್ ಶೆಟ್ಟಿ ಹಾಗೂ ಅಧ್ಯಕ್ಷರ ನಡುವೆ ಚರ್ಚೆ ನಡೆಯಿತು. ಈ ಸಂದರ್ಭ ಸದಸ್ಯೆ ಶುಭ ಸುರೇಶ್, ಸೂರಜ್ ಶೆಟ್ಟಿ, ಸೋಮನಾಥ್ ಕೋಟ್ಯಾನ್ ನಡುವೆ ಮಾತಿನ ಚಕಮಕಿ ಉಂಟಾಯಿತು.

ಗ್ರಾಮಸಭೆಗೆ ಗ್ರಾಮಕರಣಿಕರು ಗೈರಾಗಿದ್ದು, ಸಭೆಗಳಿಗೆ ಕಡ್ಡಾಯವಾಗಿ ಗ್ರಾಮಕರಣಿಕರು ಅಥವಾ ಕಂದಾಯ ಇಲಾಖೆಯ ಪ್ರತಿನಿಧಿಗಳು ಬರಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಉಪಾಧ್ಯಕ್ಷ ಜಯಂತಿ, ಗ್ರಾಮ ಸಭೆ ನೋಡಲ್ ಅಧಿಕಾರಿ ಕೆ.ಪ್ರವೀಣ್, ಲೆಕ್ಕ ಸಹಾಯಕ ರಮೇಶ್ ಬಂಗೇರ, ಸದಸ್ಯರು, ಇಲಾಖಾ ಅಧಿಕಾರಿಗಳು ಗ್ರಾಮ ಸಭೆಯಲ್ಲಿ ಉಪಸ್ಥಿತರಿದ್ದರು.

ರಸ್ತೆ ಕಾಮಗಾರಿ ನಡೆಯದೆ ತೊಂದರೆ

ಮುಡಾಯಿಕಾಡು ಕಾಡುಮನೆ ಪ್ರದೇಶದಲ್ಲಿ ಬಹಳ ಬೇಡಿಕೆ ಇರುವ ರಸ್ತೆಗೆ ಎರಡು ವರ್ಷಗಳ ಹಿಂದೆ ಜಲ್ಲಿ ತಂದು ಹಾಕಿದರೂ, ಕಾಮಗಾರಿ ನಡೆದಿಲ್ಲ. ಇದರಿಂದ ಈ ಪ್ರದೇಶದಲ್ಲಿ ವಾಹನ ಓಡಾಟ ಅಸಾಧ್ಯವಾಗಿದೆ ಎಂದು ಗ್ರಾಮಸ್ಥ ಮಂಜುನಾಥ್ ಹೇಳಿದರು. ಅಕ್ಟೋಬರ್ ತಿಂಗಳೊಳಗಡೆ ಗುತ್ತಿಗೆದಾರರು ಕಾಮಗಾರಿ ಕೈಗೊಳ್ಳದಿದ್ದರೆ ಸಂಬಂಧಪಟ್ಟ ಇಲಾಖೆಗೆ ದೂರು ನೀಡಲಾಗುವುದೆಂದು ಪಿಡಿಒ ತಿಳಿಸಿದರು.

ಚರಂಡಿ, ನೀರಿನ ಪೈಪ್‌ಲೈನ್‌ಗೆ ಸಮಸ್ಯೆ

ಬೆಳುವಾಯಿ ಗ್ರಾಪಂ ವ್ಯಾಪ್ತಿಯ ಹಲವೆಡೆ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗಳು ನಡೆಯುತ್ತಿದ್ದು, ರಸ್ತೆ, ಚರಂಡಿ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್‌ಗಳಿಗೆ ಆಗುತ್ತಿರುವ ತೊಂದರೆಗಳ ಕುರಿತು ಗ್ರಾಮಸ್ಥರು, ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಸಮಸ್ಯೆಗಳಾಗಿದ್ದಲ್ಲಿ ಸ್ಥಳ ಪರಿಶೀಲನೆ ಮಾಡಿ, ಪರಿಹರಿಸಲಾಗುವುದು ಎಂದು ಡಿಬಿಎಲ್ ಕಂಪನಿಯ ಅಧಿಕಾರಿ ಬಾಲಾಜಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net