

ಬೇಲೂರು : ರೈತರಿಗೆ ಸರ್ಕಾರ ಕೊಡುವ ಬೆಳೆ ಪರಿಹಾರದ ಮೊತ್ತವನ್ನು ಬ್ಯಾಂಕಿನವರು ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ಬೆಳೆ ಪರಿಹಾರವನ್ನು ಸಾಲದ ಖಾತೆಗೆ ಜಮಾ ಮಾಡಿದರೆ ಅಂತಹ ಬ್ಯಾಂಕ್‌ನವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಎಂ.ಮಮತಾ ಹೇಳಿದರು. ತಹಸೀಲ್ದಾರ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಕಷ್ಟಪಟ್ಟು ಬೆಳೆದ ಬೆಳೆ ಅತೀವೃಷ್ಠಿ-ಅನಾವೃಷ್ಠಿ ಅಥವಾ ಇನ್ನಿತರೆ ಸಂದರ್ಭ ಹಾನಿಯಾದ ಬೆಳೆಗೆ ಸರ್ಕಾರ ರೈತರ ಸಂಕಷ್ಟಕ್ಕೆಂದು ಪರಿಹಾರವಾಗಿ ಇಂತಿಷ್ಟೆಂದು ಹಣ ನೀಡುತ್ತಿದೆ. ಈ ಹಣ ನಿಯಮದ ಪ್ರಕಾರ ರೈತರ ಬ್ಯಾಂಕ್ ಅಕೌಂಟ್‌ಗೆ ಜಮೆ ಆಗಬೇಕಿರುತ್ತದೆ. ಆದರೆ ಕೆಲ ಬ್ಯಾಂಕುಗಳಲ್ಲಿ ರೈತರ ಅಕೌಂಟ್‌ಗೆ ಜಮೆ ಆದಂತ ಪರಿಹಾರದ ಹಣವನ್ನು ರೈತರು ಪಡೆದ ಬೆಳೆ ಸಾಲಕ್ಕೆ ತೀರುವಳಿಯಾಗಿ ತೆಗೆದು ಕೊಳ್ಳುತ್ತಿರುವ ಬಗ್ಗೆ ಹಲವು ರೈತರಿಂದ ದೂರುಗಳು ಬರುತ್ತಿದೆ ಎಂದರು.
ನಿಯಮದ ಪ್ರಕಾರ ಪರಿಹಾರದ ಹಣವನ್ನು ಬ್ಯಾಂಕ್‌ನವರು ಸಾಲಕ್ಕೆ ಜಮೆ ಮಾಡಿ ಕೊಳ್ಳುವಂತಿಲ್ಲ. ಒಂದುವೇಳೆ ಜಮೆ ಮಾಡಿರುವ ಬಗ್ಗೆ ಖಚಿತ ದಾಖಲೆ ಸಹಿತ ಕಂಡು ಬಂದಲ್ಲಿ ಅಂತಹ ಬ್ಯಾಂಕ್‌ನವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜತೆಗೆ ರೈತರ ಬ್ಯಾಂಕ್ ಅಕೌಂಟ್ ಬ್ಲಾಕ್ ಆಗಿದ್ದರೂ ಸಹ ಪುನ: ಅವರ ಅಕೌಂಟ್‌ಅನ್ನು ಮರು ಚಾಲನೆ ಮಾಡುವ ಮೂಲಕ ಪರಿಹಾರದ ಹಣವನ್ನು ರೈತರಿಗೆ ನೀಡಬೇಕು. ಈ ವಿಚಾರದಲ್ಲಿ ತೊಂದರೆ ಕೊಡಬಾರದು. ಈ ವಿಚಾರವಾಗಿ ತಾಲೂಕಿನ ರೈತರಿಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ತಹಸೀಲ್ದಾರ್ ಕಚೇರಿಯಲ್ಲಿನ ವಿಪತ್ತು ನಿರ್ವಹಣಾ ಕೇಂದ್ರದಲ್ಲಿ ಸಿಬ್ಬಂದಿಯನ್ನು ಭೇಟಿ ಆಗಬಹುದು ಎಂದರು.
ತಾಲೂಕಿನಲ್ಲಿ ಒಟ್ಟು 34.985 ಫಲಾನುಭವಿಗಳಿದ್ದಾರೆ. ಇವರಿಗೆ ಒಟ್ಟು 8.60.28.817 ರೂ. ಪರಿಹಾರದ ಮೊತ್ತ ರೈತರಿಗೆ ಸಂದಾಯವಾಗಿದೆ. ರಾಗಿ, ಜೋಳ, ಭತ್ತದ ಬೆಳೆಗಳಿಗೆ ಪರಿಹಾರ ನೀಡಲಾಗುತ್ತಿದೆ. ಪರಿಹಾರ ಹಣವನ್ನು ಸಾಲದ ಖಾತೆಗೆ ಜಮೆ ಮಾಡುತ್ತಿರುವುದು ಕಂಡು ಬಂದಲ್ಲಿ ದೂರವಾಣಿ ಸಂಖ್ಯೆ: 9886503074 ಗೆ ಮತ್ತು ಸಹಾಯವಾಣಿ ಸಂಖ್ಯೆ: 08177-222234 ಕರೆ ಮಾಡಬಹುದು ಎಂದು ತಿಳಿಸಿದ್ದಾರೆ.