ನ್ಯಾಯಸುಧಾ ಮಂಗಳ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ

31blrp4
Published on

ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥರ ನೇತೃತ್ವ
ಬೇಲೂರು: ಉಡುಪಿಯ ಅಷ್ಟ ಮಠಗಳಲ್ಲೊಂದಾದ ಶ್ರೀ ಪಲಿಮಾರು ಮಠದಿಂದ 17ನೇ ಶ್ರೀಮದ್ ಬ್ರಹ್ಮಸೂತ್ರ-ಅನುವ್ಯಾಖ್ಯಾನ ನ್ಯಾಯಸುಧಾ ಮಂಗಳ ಮಹೋತ್ಸವಕ್ಕೆ ಶುಕ್ರವಾರ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ವಿಧ್ಯುಕ್ತ ಚಾಲನೆ ನೀಡಿದರು. ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥರ ನೇತೃತ್ವ, ಸೋಸಲೆ ಶ್ರೀ ವ್ಯಾಸರಾಜರ ಮಠದ ಶ್ರೀ ವಿದ್ಯಾಶ್ರೀಶ ತೀರ್ಥರು, ಪಲಿಮಾರು ಮಠದ ಕಿರಿಯ ಶ್ರೀ ವಿದ್ಯಾ ರಾಜೇಶ್ವರ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 6 ಗಂಟೆಯಿಂದಲೇ ಸಂಸ್ಥಾನ ಪೂಜೆ, ಜ್ಞಾನ ಸತ್ರ ನೆರವೇರಿತು. ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಧಾರ್ಮಿಕ ಚಟುವಟಿಕೆಗಳಿಗೆ ಚಾಲನೆ ನೀಡಿದರು. ನಂತರ ವಾಕ್ಯಾರ್ಥ ಗೋಷ್ಠಿಯ ‘ಜಿಜ್ಞಾಸ ಶಬ್ದೇನ ಜ್ಞಾನೇ ಚ್ಛಾಂತರ್ಣೀತಃ ವಿಚಾರಃ ಲಕ್ಷ್ಯತೆ’ ಇದರ ನಿರ್ವಾಹಕ ಅಧ್ಯಕ್ಷತೆಯನ್ನು ವಿದ್ವಾನ್ ರಾಜ.ಎಸ್.ಗಿರಿ ಆಚಾರ್ಯ ವಹಿಸಿದ್ದರು. ಕಾರ್ಯಕ್ರಮಕ್ಕೆ ಬೆಳಗ್ಗೆಯೇ ಸಾವಿರಾರು ಭಕ್ತರು ಆಗಮಿಸಿದ್ದರು.
ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ಬೇಲೂರು ವಿಶ್ವವಿಖ್ಯಾತ ಸ್ಥಳವಾದರೂ ಪ್ರಗತಿಯಲ್ಲಿ ಸ್ವಲ್ಪ ಹಿಂದೆ ಬಿದ್ದಿದೆ. ಶಾಸಕರು ಮನಸ್ಸು ಮಾಡಿ ಪ್ರಗತಿಯತ್ತ ಕೊಂಡೊಯ್ಯಲು ಶ್ರಮಿಸಬೇಕಿದೆ ಎಂದರು.
ಪರೀಕ್ಷೆ ನೀಡಿದ ವಿದ್ಯಾರ್ಥಿಗಳು: ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರ ಗರಡಿಯಲ್ಲಿ ಉನ್ನತಾಧ್ಯಯನ ನಡೆಸಿ ಶ್ರೀ ಜಯತೀರ್ಥರು (ಟೀಕಾಚಾರ್ಯರು) ರಚಿಸಿದ ಮಹೋನ್ನತ ಗ್ರಂಥ ‘ ಶ್ರೀಮನ್ ನ್ಯಾಯಸುಧಾ’ ವನ್ನು ಕರಗತ ಮಾಡಿಕೊಂಡ ವಿದ್ಯಾರ್ಥಿಗಳಾದ ಪೂರ್ಣಪ್ರಜ್ಞ ರಾಯಚೂರು, ಶ್ರೀವಾಸ ಕಾಪು, ಉಡುಪಿ ಸತ್ಯಾನಂದ ಜೋಯಿಸ್, ಉಡುಪಿ ಕಾರ್ತಿಕ ಭಟ್, ಪರೀಕ್ಷಿತ ದಾವಣಗೆರೆ ಮತ್ತು ಚೆನ್ನೈ ಚಕ್ರಪಾಣಿ ಅವರು ಮುಕ್ತ ವೇದಿಕೆಯಲ್ಲಿ ಪರೀಕ್ಷೆ ನೀಡಿದರು. ವಿವಿಧ ಮಠದ ವಿದ್ವಾಂಸರು ವಿದ್ಯಾರ್ಥಿಗಳ ಜ್ಞಾನ ಮತ್ತು ವಿಚಾರ ಮಂಡನೆ ಸಾಮರ್ಥ್ಯವನ್ನು ಕೊಂಡಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net