

ಬೇಲೂರು: ಪಟ್ಟಣದಲ್ಲಿ ಮಂಗಳವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ಥವಾಗಿತ್ತು. ಗುಡುಗು ಸಿಡಿಲಿನ ಮಳೆಗೆ ವಾಹನಗಳ ಸವಾರರು ಪರದಾಡಿದರು.
ಪಟ್ಟಣದಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ಅಬ್ಬರಿಸಿದ ಮಳೆಯಿಂದಾಗಿ ರಸ್ತೆ ಪಕ್ಕದಲ್ಲಿದ್ದ ಕಸ ಕಡ್ಡಿಗಳೆಲ್ಲ ನೀರಿನಲ್ಲಿ ಕೊಚ್ಚಿ ಚರಂಡಿಗೆ ಸೇರಿದ್ದರಿಂದ ತುಂಬಿ ಹರಿದವು. ದೇಗುಲ ರಸ್ತೆ, ಮುಖ್ಯ ರಸ್ತೆ ಹಾಗೂ ಹರ್ಡಿಕರ್ ವೃತ್ತದ ಇಂದಿರಾ ಕ್ಯಾಂಟೀನ್ ಮುಂಭಾಗ ಮಳೆಯ ನೀರಿನಿಂದ ಸಂಪೂರ್ಣ ಜಲಾವೃತವಾಗಿತ್ತು. ಇದರಿಂದಾಗಿ ಸಾರ್ವಜನಿಕರು ಹಾಗೂ ವಾಹನಗಳ ಸವಾರರು ಪರದಾಡಿದರು. ಗುಡುಗು ಮಿಂಚಿನಿಂದಾಗಿ ಪಟ್ಟಣದಾದ್ಯಂತ ಮೂರು ಗಂಟೆಗೂ ಹೆಚ್ಚು ಕಾಲ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದ್ದರಿಂದ ಜನರು ಕತ್ತಲೆಯಲ್ಲಿ ಕಳೆಯುವಂತಾಗಿತ್ತು.