ಬೀದಿ ಬದಿ ವ್ಯಾಪಾರಿಗಳಿಗೆ ಅನುಮತಿ ಬೇಡ

14blrp2
Published on

ಬೇಲೂರು : ಬೀದಿ ಬದಿ, ಫುಟ್‌ಪಾತ್ ಮೇಲೆ ಗೂಡಂಗಡಿ, ತಳ್ಳುಗಾಡಿ ಮತ್ತು ಟೆಂಟ್‌ಗಳನ್ನು ಪುರಸಭೆ ಅಧಿಕಾರಿಗಳು ತೆರವುಗೊಳಿಸಿ ಪಟ್ಟಣದ ಅಂದ ಹೆಚ್ಚಿಸಿದ್ದಾರೆ. ಆದರೆ ಯಾರದೋ ಒತ್ತಡಕ್ಕೆ ಮಣಿದು ಪುನ: ಬೀದಿಬದಿ ವ್ಯಾಪಾರಕ್ಕೆ ಅನುಮತಿ ನೀಡಬಾಋದು ಎಂದು ಕರವೇ (ಪ್ರವೀಣ್‌ಶೆಟ್ಟಿ)ಬಣದ ಕಾರ್ಯಕರ್ತರು ಪುರಸಭೆ ವ್ಯವಸ್ಥಾಪಕಿ ಶಾರದಾ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು. ಕರವೇ ತಾಲೂಕು ಅಧ್ಯಕ್ಷ ವಿ.ಎಸ್.ಬೋಜೇಗೌಡ ಮಾತನಾಡಿ, ಬೇಲೂರು ವಿಶ್ವ ಮಟ್ಟದ ಪಾರಂಪರಿಕ ಮತ್ತು ಪ್ರವಾಸಿ ತಾಣ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಯಾತ್ರಿಕರು ಬರುತ್ತಾರೆ. ಅವರು ದೇಗುಲಕ್ಕೆ ತೆರಳುವ ಸಂದರ್ಭ ರಸ್ತೆ ಪಕ್ಕದಲ್ಲಿ, ವೃತ್ತಗಳ ಬಳಿ ಅಕ್ರಮವಾಗಿ ಇಟ್ಟಿರುವ ಗೂಡಂಗಡಿ, ಟೆಂಟ್‌ಗಳು ಮತ್ತು ತಳ್ಳು ಗಾಡಿ ವ್ಯಾಪಾರಗಳು
ಕಿರಿಕಿರಿ ಉಂಟುಮಾಡುತ್ತವೆ.
ಪುರಸಭೆ ಅಧಿಕಾರಿಗಳು 3 ದಿನಗಳ ಹಿಂದೆ ಇವುಗಳನ್ನು ತೆರವುಗೊಳಿಸುವ ದಿಟ್ಟ ಕಾರ್ಯ ಮಾಡಿದ್ದಾರೆ. ಆದರೆ ಪುರಸಭೆಯ ಕೆಲ ಸದಸ್ಯರು ಹಾಗೂ ಪ್ರಮುಖ ರಾಜಕಾರಣಿಗಳು ಗೂಡಂಗಡಿ, ತಳ್ಳುಗಾಡಿ ವ್ಯಾಪಾರಿಗಳ ಪರ ಲಾಬಿ ಮಾಡುತ್ತ ಇದ್ದಾರೆ. ಯಾವುದೇ ಆಮಿಷಕ್ಕೂ ಪುರಸಭೆ ಅಧಿಕಾರಿಗಳು ಕಿವಿಗೊಡದೆ ಐತಿಹಾಸಿಕ ಪಟ್ಟಣದ ಅಂದ ಹೆಚ್ಚಿಸಲು ಮುಂದಾಗಬೇಕು. ವಾಣಿಜ್ಯ ಮಳಿಗೆಗಳ ಆವರಣದಲ್ಲಿ ಮಾತ್ರ ವ್ಯಾಪಾರಕ್ಕೆ ಅವಕಾಶ ಕೊಡಬೇಕು. ಮತ್ತೆ ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ನೀಡಿದರೆ ನಮ್ಮ ಸಂಘಟನೆಯಿಂದ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು
ಅವರು ಎಚ್ಚರಿಸಿದರು. ಕರವೇ ಪದಾಧಿಕಾರಿಗಳಾದ ಜಯಪ್ರಕಾಶ್, ಕಾರ್ತಿಕ್, ಮಂಜು ಆಚಾರ್, ಲೋಕೇಶ್, ಕುಮಾರ್, ಚಂದನ್, ಸೀನಣ್ಣ, ಹುಸೇನ್, ಸತೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net