

ಬೇಲೂರು : ಯುವಜನರು ಆರೋಗ್ಯ ಪಾಲನೆ ನಿಟ್ಟಿನಲ್ಲಿ ರಕ್ತದಾನ ಮಾಡುವ ಮೂಲಕ ಸಮಾನಕ್ಕೆ ವಿಶೇಷ ಸೇವೆ ಸಲ್ಲಿಸಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲೂಕು ಘಟಕದ ಸಭಾಪತಿ ವೈ.ಎಸ್.ಸಿದ್ದೇಗೌಡ ಹೇಳಿದರು.
ಪಟ್ಟಣದ ಸಮೀಪದ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹಾಗೂ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಐಕ್ಯೂಎಸಿ ಯುವ ರೆಡ್‌ಕ್ರಾಸ್ ಘಟಕದಿಂದ ಆಯೋಜಿಸಿದ್ದ ರಕ್ತದಾನ ಶಿಬಿರ ಮತ್ತು ಆರೋಗ್ಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಹೆಬ್ಬಾಳು ಹಾಲಪ್ಪ ಮಾತನಾಡಿ, ಇತ್ತೀಚಿನ ವೈಜ್ಞಾನಿಕ ರಂಗದ ಬೆಳವಣಿಗೆ ಎಷ್ಟೇ ಎತ್ತರಕ್ಕೆ ಹೋದರೂ ನಾವು ಒಂದು ಹನಿ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲದಾಗಿದೆ. ಆದ್ದರಿಂದಲೇ ನಮ್ಮ ರಕ್ತಕ್ಕೆ ಹೆಚ್ಚು ಬೇಡಿಕೆ ಇದೆ. ಆರೋಗ್ಯವಂತ ವ್ಯಕ್ತಿ ರಕ್ತದಾನಕ್ಕೆ ಮುಂದಾದರೆ ತುರ್ತು ಸಂದರ್ಭದಲ್ಲಿ ಹಲವರ ಜೀವಗಳನ್ನು ಉಳಿಸಿದ
ಧನ್ಯತೆ ದೊರಕುತ್ತದೆ. ರಕ್ತವನ್ನು ದಾನ ಮಾಡುವಾಗಿ ಖಾಸಗಿ ಸಂಸ್ಥೆಗಳಿಗೆ ನೀಡದೆ, ಸರ್ಕಾರಿ ಆಸ್ಪತ್ರೆಯಲ್ಲಿನ ರಕ್ತನಿಧಿಗೇ ನೀಡಿದರೆ ಬಹು ಉಪಯೋಗವಾಗುತ್ತದೆ. ಈ ನಿಟ್ಟಿನಲ್ಲಿ ಯುವ ಜನರು ಸ್ವಯಂ ಪ್ರೇರಿತರಾಗಬೇಕು ಎಂದು ಕಿವಿಮಾತು ಹೇಳಿದರು.
ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಮಹೇಶ್, ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಕುಮಾರ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಅಜಿತ್, ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್, ಅರೇಹಳ್ಳಿ ವೈದ್ಯಾಧಿಕಾರಿ ಡಾ.ಮಮತಾ, ಡಾ.ಚೇತನ್, ಐಕ್ಯೂಎಸಿ ಸಂಚಾಲಕ ಡಾ.ನಾಗೇಂದ್ರಪ್ಪ, ಯುವ ರೆಡ್‌ಕ್ರಾಸ್ ಸಂಚಾಲಕ ಮೋಹನ್ ಕುಮಾರ್, ರೆಡ್‌ಕ್ರಾಸ್ ಸಂಸ್ಥೆ ಘಟಕದ ಪ್ರಧಾನ ಕಾರ್ಯದರ್ಶಿ ಧನಂಜಯ್ ಇದ್ದರು.