ಮೊಳಕೆ ಕಾಣದ ಬಿತ್ತನೆ ಆಲೂಗಡ್ಡೆ

blrp1
Published on

ಬೇಲೂರು: ತಾಲೂಕಿನಾದ್ಯಂತ ರೈತರು ಬಿತ್ತನೆ ಮಾಡಿರುವ ಆಲೂಗಡ್ಡೆ ಮೊಳಕೆ ಬಾರದೆ ಭೂಮಿಯಲ್ಲೇ ಕರಗುತ್ತಿದ್ದು, ತಿನ್ನುವ ಆಲೂಗಡ್ಡೆಯನ್ನೇ ಬಿತ್ತನೆಗೆ ನೀಡುವ ಮೂಲಕ ಜಿಲ್ಲಾಡಳಿತ ಬಹುದೊಡ್ಡ ಬರೆ ಎಳೆದಿದೆ.


ಅರೇಹಳ್ಳಿ ಹೋಬಳಿಯ ಮೈಲಹಳ್ಳಿ ಸೇರಿ ಅಕ್ಕಪಕ್ಕದ ಹತ್ತಾರು ಹಳ್ಳಿಗಳಲ್ಲಿ ಈಗಾಗಲೇ ಆಲೂಗಡ್ಡೆ ಬಿತ್ತನೆ ಮಾಡಲಾಗಿದೆ. ಕ್ವಿಂಟಾಲ್‌ಗೆ 2250 ರೂ. ನಂತೆ ಖರೀದಿಸಿದ ಆಲೂಗಡ್ಡೆ ಭೂಮಿಯಲ್ಲಿ ಕೊಳೆಯುತ್ತಿದೆ. ಬಿತ್ತನೆ ಮಾಡಿದ 10 ರಿಂದ 12 ದಿನಗಳೊಳಗೆ ಆಲೂಗಡ್ಡೆ ಮೊಳಕೆಯೊಡೆಯಬೇಕಿತ್ತು. ಆದರೆ 20 ದಿನಗಳು ಕಳೆದರೂ ಜಮೀನಿನಲ್ಲಿ ಮೊಳಕೆ ಕಾಣಿಸುತ್ತಿಲ್ಲ. ಏನೆಂದು ತಿಳಿಯಲು ರೈತರು ಬಿತ್ತನೆ ಮಾಡಿದ್ದ ಆಲೂಗಡ್ಡೆಯನ್ನು ಕಿತ್ತು ನೋಡಿದರೆ ಬೀಜ ಸಂಪೂರ್ಣವಾಗಿ ಭೂಮಿಯಲ್ಲೇ ಕೊಳೆಯುತ್ತಿರುವುದು ಕಂಡುಬಂದಿದೆ. ಇದರಿಂದಾಗಿ ಸಾವಿರಾರು ರೂ. ಖರ್ಚು ಮಾಡಿ ಆಲೂಗಡ್ಡೆ ಬಿತ್ತನೆ ಮಾಡಿದ್ದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.


ಈ ಬಗ್ಗೆ ಸಂಬಂಧಿಸಿದ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಗಮನಹರಿಸಿ ಜಮೀನಿನಲ್ಲಿ ಕೊಳೆಯುತ್ತಿರುವ ಬಿತ್ತನೆ ಬೀಜ ಪರಿಶೀಲಿಸಿ, ರೈತರಿಗೆ ಆಗಿರುವ ನಷ್ಟ ಕೊಡಿಸಬೇಕೆಂದು ಆಗ್ರಹಿಸಿದ್ದಾರೆ.


ಹಾಸನ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಆಲೂಗಡ್ಡೆ ತಂದು ಬಿತ್ತಿದ್ದೆ. ಆದರೆ ಭೂಮಿಗೆ ಹಾಕಿದ್ದ ಬೀಜ ಮೊಳಕೆಯೊಡೆಯದೆ ಕೊಳೆಯುತ್ತಿದೆ. ಇದರಿಂದ ನಮಗೆ ಸಾಕಷ್ಟು ನಷ್ಟವಾಗಿದೆ. ತಿನ್ನುವ ಆಲೂಗಡ್ಡೆಯನ್ನೇ ಬಿತ್ತನೆಗೆ ನೀಡಿ ಮೋಸ ಮಾಡಲಾಗಿದೆ.
ಮಳ್ಳೂರಯ್ಯ, ರೈತ ಮೈಲಹಳ್ಳಿ

ಕೆಲ ರೈತರ ಜಮೀನುಗಳಲ್ಲಿ ಬಿತ್ತನೆ ಮಾಡಿದ್ದ ಆಲೂಗಡ್ಡೆ ಮೊಳಕೆಯೊಡೆಯದೆ ಕೊಳೆಯುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಒಂದೆರಡು ದಿನಗಳಲ್ಲಿ ವಿಜ್ಞಾನಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.
ಸೀಮಾ, ಸಹಾಯಕ ನಿರ್ದೇಶಕರು ತೋಟಗಾರಿಕಾ ಇಲಾಖೆ, ಬೇಲೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net