

ಶಿವಮೊಗ್ಗ: ರಾಜೀವ್‌ಗಾಂಧಿ ವಸತಿ ಯೋಜನೆ ಹಗರಣದ ಸತ್ಯಾಂಶ ಹೊರಬರಬೇಕಾದರೆ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಶಾಸಕ ಮತ್ತು ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಒತ್ತಾಯಿಸಿದರು.
ಕಾಂಗ್ರೆಸ್ ಶಾಸಕ, ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಅವರು ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರವಾಗಿದೆ ಎಂದು ಆರೋಪಿಸಿದ್ದಾರೆ. ಅದರ ಆಡಿಯೋ ಬಹಿರಂಗವಾಗಿದ್ದು, ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ. ಹಾಗಾಗಿ ಸಚಿವರು ರಾಜೀನಾಮೆ ನೀಡಿ ತನಿಖೆ ಎದುರಿಸಬೇಕೆಂದು ಸಲಹೆ ನೀಡಿದರು.
ಪಕ್ಷದ ಶಾಸಕರೇ, ಸಚಿವರ ಮೇಲೆ ಈ ರೀತಿ ಆರೋಪ ಮಾಡುವುದರಿಂದ ಪಕ್ಷದಲ್ಲಿ ಗೊಂದಲ ಉಂಟಾಗುತ್ತದೆ. ಆರೋಪ ಸತ್ಯವೋ ಸುಳ್ಳೋ, ಸತ್ಯಾಂಶ ಹೊರಬರಬೇಕು. ಸಚಿವರ ಮೇಲೆ ಇಂತಹ ಆರೋಪಗಳು ಹೊಸದೇನಲ್ಲ. ಈ ಹಿಂದೆ ಸಚಿವ ನಾಗೇಂದ್ರ ಅವರ ಮೇಲೂ ಆರೋಪ ಬಂದಾಗ ಮುಖ್ಯಮಂತ್ರಿಗಳ ಸಲಹೆಯಂತೆ ರಾಜೀನಾಮೆ ಕೊಟ್ಟಿದ್ದರು. ಹೀಗಾಗಿ ವಸತಿ ಸಚಿವರು ರಾಜೀನಾಮೆ ಕೊಡುವುದು ಸೂಕ್ತ ಎಂದು ಹೇಳಿದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ ಉಪಸ್ಥಿತರಿದ್ದರು.