ವೈದ್ಯಾಧಿಕಾರಿ ವಿರುದ್ಧ ಬೇಳೂರು ಸಿಡಿಮಿಡಿ

23 RPT 1
ರಿಪ್ಪನ್‌ಪೇಟೆ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಾ. ಆಂಜನೇಯ, ಧನಲಕ್ಷ್ಮೀ, ಆಸೀಫ್, ಕಲಗೋಡು ರತ್ನಾಕರ ಇತರರಿದ್ದರು.
Published on

ರಿಪ್ಪನ್‌ಪೇಟೆ: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶುಕ್ರವಾರ ಸಂಜೆ ದಿಢೀರ್ ಭೇಟಿ ನೀಡಿದ ಶಾಸಕ ಗೋಪಾಲಕೃಷ್ಣ ಬೇಳೂರು ಅಲ್ಲಿನ ಅವ್ಯವಸ್ಥೆಯನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯ ವೈದ್ಯಾಧಿಕಾರಿ ಅನಿಲ್‌ಕುಮಾರ್ ಗೈರಾಗಿರುವುದನ್ನು ತಿಳಿದ ಶಾಸಕರು ಸಿಡಿಮಿಡಿಗೊಂಡರು.

ಜಿಲ್ಲಾ ವೈದ್ಯಾಧಿಕಾರಿಗಳಿಗೆ ಕರೆ ಮಾಡಿ, ತಪಾಸಣೆ ನಡೆಸಬೇಕಿದ್ದ ವೈದ್ಯರು ಆಸ್ಪತ್ರೆಯಲ್ಲಿಲ್ಲ. ಇದರಿಂದ ಜನರಿಗೆ ತೊಂದರೆ ಆಗುತ್ತಿದೆ. ಈ ವೈದ್ಯರ ವಿರುದ್ಧ ಈಗಾಗಲೇ ಹಲವಾರು ಬಾರಿ ಸಾರ್ವಜನಿಕರು ದೂರಿದ್ದಾರೆ. ಆದರೂ ತನ್ನ ನಡವಳಿಕೆಯನ್ನು ಸುಧಾರಿಸಿಕೊಂಡಿಲ್ಲ. ಸೂಕ್ತ ಸಮಯಕ್ಕೆ ಹಾಜರಾಗದೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. ಇಂತಹವರು ನಮಗೆ ಅಗತ್ಯವಿಲ್ಲ. ಕೂಡಲೆ ವೈದ್ಯರನ್ನು ಅಮಾನತ್ತಿನಲ್ಲಿಟ್ಟು ತಕ್ಷಣವೇ ವರದಿ ನೀಡುವಂತೆ ಸೂಚಿಸಿದರು.
ಇನ್ನೊಂದೆಡೆ ಆಸ್ಪತ್ರೆಯಲ್ಲಿನ ಸಿಬ್ಬಂದಿಯಲ್ಲಿ ಹೊಂದಾಣಿಕೆ ಇಲ್ಲದಿರುವುದು ಶಾಸಕ ಗೋಪಾಲಕೃಷ್ಣ ಬೇಳೂರು ಗಮನಕ್ಕೂ ಬಂತು. ಹೊರಗುತ್ತಿಗೆ ನೌಕರೆ ಸ್ವಾತಿ ವಿರುದ್ಧ ಅಶಿಸ್ತಿನ ವರ್ತನೆ ಕಾರಣ ನೀಡಿ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದು ಈ ಬಗ್ಗೆ ಶಾಸಕರು ವಿಚಾರಿಸಿದಾಗ ಹೊರಗುತ್ತಿಗೆ ನೌಕರೆ ಸರಿಯಾಗಿ ಕೆಲಸ ಮಾಡುತ್ತಿಲ್ಲ, ವಿನಾಕಾರಣ ಸಿಬ್ಬಂದಿಗೆ ತೊಂದರೆ ಕೊಡುತ್ತಿದ್ದಾರೆ. ಅವರು ಇಲ್ಲಿ ಕೆಲಸ ಮಾಡುವುದಾದರೆ ನಮ್ಮನ್ನು ಸಾಮೂಹಿಕವಾಗಿ ಬೇರೆಡೆ ವರ್ಗಾವಣೆ ಮಾಡಿ ಎಂದು ಸರ್ಕಾರಿ ಸಿಬ್ಬಂದಿ ಕೈಮುಗಿದು ಶಾಸಕರಲ್ಲಿ ಮನವಿ ಮಾಡಿದರು.
ನನ್ನದೇನು ತಪ್ಪಿಲ್ಲ, ಸರ್ಕಾರಿ ಸಿಬ್ಬಂದಿ ಕಾರ್ಯವೈಖರಿಯೇ ಸರಿ ಇಲ್ಲವೆಂದು ಹೊರಗುತ್ತಿಗೆ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದಾಗ ಮಧ್ಯ ಪ್ರವೇಶಿಸಿದ ಶಾಸಕರು, ಸಾರ್ವಜನಿಕರ ಕೆಲಸ ಮಾಡಲು ಬಂದಿರುವ ನೀವು ಪರಸ್ಪರ ಕಿತ್ತಾಡುವುದು ಒಳ್ಳೆಯದಲ್ಲ. ಇನ್ನೊಮ್ಮೆ ದೂರು ಬಂದರೆ ನಿಮ್ಮ ವಿರುದ್ಧ ನಿರ್ದಾಕ್ಷಣ್ಯ ಕ್ರಮಕ್ಕೆ ಸೂಚಿಸುತ್ತೇನೆಂದು ಎಚ್ಚರಿಕೆ ನೀಡಿದರು. ನಂತರ ಒಲ್ಲದ ಮನಸ್ಸಿನಿಂದಲೇ ತಮ್ಮ ತಮ್ಮ ಕೆಲಸ ಕಾರ್ಯಗಳಿಗೆ ತೊಡಗಿಕೊಂಡರು.
ಡಾ. ಆಂಜನೇಯ, ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ, ಸದಸ್ಯ ಆಸೀಫ್, ಮುಖಂಡರಾದ ಕಲಗೋಡು ರತ್ನಾಕರ, ಚಂದ್ರಮೌಳಿ ಗೌಡ, ಶ್ರೀನಿವಾಸಾಚಾರ್, ದೇವರಾಜ್, ಗಣಪತಿ, ಸಣ್ಣಕ್ಕಿ ಮಂಜು, ಕೆರೆಹಳ್ಳಿ ರವೀಂದ್ರ, ಶ್ರೀಧರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net