ಗುಂಡಿಬಿದ್ದ ಬೇಲೂರು-ಬಿಕ್ಕೋಡು ಮಾರ್ಗ

9blrp3
ಬೇಲೂರು-ಬಿಕ್ಕೋಡು ನಡುವೆ ಹಾದು ಹೋಗಿರುವ ರಾಜ್ಯ ಹೆದ್ದಾರಿ ರಸ್ತೆ ಗುಂಡಿಗೆ ತಗರೆ ಸಮೀಪ ಬೈಕ್ ಬಿದ್ದಿರುವುದನ್ನು ವೀಕ್ಷಿಸುತ್ತಿರುವ ಗ್ರಾಮಸ್ಥರು.
Published on

ನಿತ್ಯ ಹೆಚ್ಚುತ್ತಿದೆ ಅಪಘಾತಗಳ ಸಂಖ್ಯೆ

ಬೇಲೂರು: ಬೇಲೂರು-ಬಿಕ್ಕೋಡು ನಡುವೆ ಹಾದು ಹೋಗಿರುವ ರಾಜ್ಯ ಹೆದ್ದಾರಿ ರಸ್ತೆ ಸಂಪೂರ್ಣವಾಗಿ ಗುಂಡಿ ಬಿದ್ದಿದ್ದು, ತಾಲೂಕಿನ ತಗರೆ ಸಮೀಪ ಗುರುವಾರ ಗುಂಡಿ ತಪ್ಪಿಸಲು ಹೋದ ಬೈಕ್ ಸವಾರರು ಬಿದ್ದು ಗಾಯ ಗೊಂಡಿದ್ದಾರೆ.

ತಾಲೂಕಿನ ಕುಶಾವರ ಗ್ರಾಮದ ನಿವಾಸಿಗಳಾದ ನರೇಂದ್ರ ಮತ್ತು ಸುರೇಶ್, ಕೆಲಸದ ನಿಮಿತ್ತ ಬೇಲೂರು ಪಟ್ಟಣಕ್ಕೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಸಂದರ್ಭ ತಗರೆ ಗ್ರಾಮದ ಸಮೀಪ ರಸ್ತೆಯಲ್ಲಿದ್ದ ಆಳವಾದ ಗುಂಡಿ ತಪ್ಪಿಸಲು ಯತ್ನಿಸುತಿದ್ದಾಗ ನಿಯಂತ್ರಣ ತಪ್ಪಿ ಇಬ್ಬರೂ ಬೈಕ್ ಸಮೇತ ಬಿದ್ದಿದ್ದರಿಂದ ಕೈಕಾಲುಗಳಿಗೆ ಗಾಯಗಳಾಗಿವೆ. ತಕ್ಷಣವೇ ಸ್ಥಳೀಯರು ಗಾಯಗೊಂಡವರನ್ನು ಬೇಲೂರಿನ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.

ಬೇಲೂರು ಪಟ್ಟಣದಿಂದ ಬಿಕ್ಕೋಡು-ಸಕಲೇಶಪುರ, ಕೊಡ್ಲಿಪೇಟೆ, ಕುಶಾಲನಗರ, ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ರಸ್ತೆ ಇದಾಗಿದ್ದು, ಬೇಲೂರು-ಬಿಕ್ಕೋಡುವರೆಗಿನ 10 ಕಿಲೋ ಮೀಟರ್ ರಸ್ತೆಯಂತೂ ಹೇಳ ತೀರದಷ್ಟು ಗುಂಡಿ ಬಿದ್ದು ದ್ವಿಚಕ್ರ ವಾಹನಗಳಿರಲಿ ದೊಡ್ಡದಾದ ಲಾರಿ, ಬಸ್‌ಗಳೂ ಸಹ ಸಂಚರಿಸದಷ್ಟು ರಸ್ತೆಗಳು ಗುಂಡಿ ಬಿದ್ದು ಹದಗೆಟ್ಟು ಹೋಗಿದೆ. ಹೆಜ್ಜೆ ಹೆಜ್ಜೆಗೂ ಮಂಡಿಯುದ್ದದ ಗುಂಡಿಗಳು ಕಾಣ ಸಿಗುತ್ತವೆ. ಒಂದು ವಾಹನ ಬಂದರೆ, ಮತ್ತೊಂದು ವಾಹನಕ್ಕೆ ಜಾಗ ಬಿಡಲು ಚಾಲಕರು ಪರದಾಡುವಂತಾಗಿದೆ.

ಕುಶಾವರ ಗ್ರಾಮದ ಸುರೇಶ್ ಮಾತನಾಡಿ, ಈ ರಸ್ತೆ ರಾಜ್ಯ ಹೆದ್ದಾರಿಯಾದರೂ ಕಳೆದ ಹಲವು ವರ್ಷಗಳಿಂದ ದುರಸ್ಥಿ ಕಂಡಿಲ್ಲ. ಪ್ರತಿದಿನ ಈ ಮಾರ್ಗದಲ್ಲಿ ಸಂಚರಿಸುವ ಕೆಲವರು ಬಿದ್ದು ಗಾಯ ಗೊಳ್ಳತ್ತಲೇ ಇದ್ದಾರೆ. ವಾಹನಗಳ ನಡುವೆ ಸಣ್ಣಪುಟ್ಟ ಅಪಘಾತಕ್ಕೂ ಈ ಗುಂಡಿಗಳು ಕಾರಣವಾಗುತ್ತಿವೆ. ಆದರೂ ಜನಪ್ರತಿನಿಧಿಗಳು, ಅಧಿಕಾರಿಗಳು ರಸ್ತೆ ಅಭಿವೃದ್ಧಿ ಹೋಗಲಿ ಗುಂಡಿಗಳನ್ನು ಮುಚ್ಚಿಸುವಲ್ಲಿ ನಿರ್ಲಕ್ಷ್ಯ ತಾಳಿರುವುದರಿಂದ ಅಪಘಾತಗಳು ನಡೆದು ಜನರು ಗಾಯ ಗೊಳ್ಳುತಿದ್ದಾರೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳಾಗಲಿ ಅಥವಾ ಜನ ಪ್ರತಿನಿಧಿಗಳು ತಕ್ಷಣವೇ ರಸ್ತೆ ಗುಂಡಿಗಳನ್ನು ಮುಚ್ಚಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕಿದೆ. ಇಲ್ಲದಿದ್ದಲ್ಲಿ ಈ ಭಾಗದ ಸಾರ್ವಜನಿಕರೆಲ್ಲ ಸೇರಿ ಬೇಲೂರು-ಬಿಕ್ಕೋಡು ರಸ್ತೆ ಬಂದ್ ಮಾಡಿ ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗ್ರಾಮಸ್ಥರಾದ ನರೇಂದ್ರ, ಚಂದ್ರಶೇಖರ್, ಆಕಾಶ್, ಲೋಕೇಶ್, ರಮೇಶ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net