ಚರ್ಚೆಗೆ ಗ್ರಾಸವಾದ ಟೆಂಡರ್! : ಅಧಿಕಾರಿಗಳ ಗೈರಿಗೂ ಆಕ್ರೋಶ : ಬೆಳ್ತಂಗಡಿ ಪ.ಪಂ. ಸಾಮಾನ್ಯ ಸಭೆ

2
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಬೆಳ್ತಂಗಡಿ ಪ.ಪಂ. ವ್ಯಾಪ್ತಿಯಲ್ಲಿ ಒಟ್ಟು ಬಿ-ಖಾತಾ ಅರ್ಜಿ ಬಂದಿದೆ? ಎಷ್ಟು ಆಗಿದೆ ಎಂಬುದರ ಕುರಿತು ವಿವರ ನೀಡುವಂತೆ ಸದಸ್ಯ ಜಗದೀಶ್ ಆಗ್ರಹಿಸಿದರು.

ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಪ.ಪಂ. ಅಧ್ಯಕ್ಷ ಜಯಾನಂದ ಗೌಡರ ಅಧ್ಯಕ್ಷತೆಯಲ್ಲಿ ಮಂಗಳವಾರ ಪ.ಪಂ. ಸಭಾಂಗಣದಲ್ಲಿ ನಡೆಯಿತು.

ಪಟ್ಟಣದ ಅನೇಕ ಕಡೆ ಸಿಸಿ ಚರಂಡಿ ಮುಚ್ಚಿ ಹೋಗಿದೆ. ಜಂಗಲ್ ಕಟ್ಟಿಂಗ್ ಆಗಬೇಕಿದೆ. ಇದಕ್ಕೆ 20 ವರ್ಷ ಹಳೇ ಟೆಂಡರ್ ಪ್ರಕ್ರಿಯೆ ಅನುಸರಿಸಲಾಗುತ್ತಿದೆ. 11 ವಾರ್ಡ್‌ನ ಮೇಲೆ ಜನವಸತಿ ಪ್ರದೇಶದ ಮೇಲೆ ಸಾರ್ವಜನಿಕ ಹಿತಾಸಕ್ತಿಯಿಲ್ಲ. ಟೆಂಡರ್ ಮೊತ್ತ ಕಡಿಮೆಯಾಗಿರುವ ಪರಿಣಾಮ ಟೆಂಡರ್ ಹಾಕಲು ಯಾರು ಬಂದಿಲ್ಲ ಎಂದು ಸದಸ್ಯ ಜಗದೀಶ್ ಆರೋಪಿಸಿದರು.

ಇಂಜಿನಿಯರ್ ಮಹಾವೀರ ಆರಿಗ ಮಾತನಾಡಿ, ಅಷ್ಟು ದೊಡ್ಡ ಮೊತ್ತದ ಟೆಂಡರ್ ಕರೆಯಲು ಅವಕಾಶವಿಲ್ಲ. ಆದರೆ ಅಗತ್ಯವಾಗಿ ಮರು ಟೆಂಡರ್ ಕರೆದು ಮ್ಯಾನುವಲ್, ಜೆಸಿಬಿ ಮೂಲಕ ತೆರವುಗೊಳಿಸಲಾಗುವುದು ಎಂದರು.

ಮಹಾ ಯೋಜನೆಗೆ ತಾತ್ಕಾಲಿಕ ಅನುಮೋದನೆ ನೀಡುವ ಬಗ್ಗೆ ಕಳೆದ ಸಭೆಯಲ್ಲಿ ಚರ್ಚೆಯಾಗಿತ್ತು. ಈ ಸಭೆಯಲ್ಲಿ ತಾತ್ಕಾಲಿಕ ಅನುಮೋದಿಸಿ, ಪತ್ರಿಕೆ ಪಕ್ರಟಣೆ ನೀಡಿ ಸರ್ಕಾರಕ್ಕೆ ಸಲ್ಲಿಸಬೇಕಿದೆ ಎಂದು ಪ.ಪಂ. ಮುಖ್ಯಾಧಿಕಾರಿ ರಾಜೇಶ್ ಕೆ. ತಿಳಿಸಿದರು. ಜಗದೀಶ್ ಮಾತನಾಡಿ, ಪ.ಪಂ. ಮಹಾ ಯೋಜನೆ ಅನುಮೋದನೆ ಮಾಡುವ ಮುನ್ನವೇ ಪಟ್ಟಣದ ಒಳಗಿನ ರೆಸಿಡೆನ್ಶಿಯಲ್ ರಸ್ತೆ 6 ಮೀಟರ್, ಸಂಪರ್ಕ ರಸ್ತೆ 9 ಮೀಟರ್ ಎಂದು ಹೇಳಿ ಈಗ 9 ಮೀಟರ್ ರಸ್ತೆ ಬಿಡಬೇಕೆಂದು ಹೇಳುತ್ತಿದ್ದೀರಿ. ಇದರಿಂದ ಪಟ್ಟಣದಲ್ಲಿ ಮನೆಗಳಿಗೆ ಹಾನಿಯಾಗುತ್ತದೆ. ಅದನ್ನು 6 ಮೀಟರ್‌ಗೆ ಮೀಸಲಿಡಬೇಕು. ಹಾಗಾಗದಿದ್ದಲ್ಲಿ ಪ್ರತಿಭಟನೆಗೂ ಸಿದ್ಧ ಎಂದರು. ಇದಕ್ಕೆ ಅಧ್ಯಕ್ಷರೂ 6 ಮೀಟರ್ ಬಿಡದಿದ್ದರೆ ನಾವು ಅನುಮೋದನೆಗೆ ಒಪ್ಪಿಗೆ ನೀಡುವುದಿಲ್ಲ ಎಂದರು.

ಎಡಿಎ ಪ್ರವೀಣ್ ಮಾತನಾಡಿ, 2018ರಂತೆ ಪಟ್ಟಣಕ್ಕೆ ಮಹಾ ಯೋಜನೆ ತಯಾರಿಸಲಾಗಿದೆ. ವಿವಿಧ ಹಂತದಲ್ಲಿ ಸರ್ವೇ ನಡೆಸಿ ಸ್ಥಳೀಯಾಡಳಿತ ಮುಂದಿಟ್ಟು ಗೆಜೆಟ್ ನೋಟಿಫಿಕೇಶನ್ ಕೊಟ್ಟು, ಸಾರ್ವಜನಿಕರಿಗೆ ಆಕ್ಷೇಪ ಸಲ್ಲಿಸಲು 60 ದಿನಗಳ ಕಾಲಾವಕಾಶವಿದೆ. 9 ಮೀಟರ್ ರಸ್ತೆ ಮೀಸಲಿಡುವಂತೆ ಸರ್ಕಾರವೇ ಸೂಚಿಸಿದೆ. ಭವಿಷ್ಯದ ಯೋಜನೆಗಾಗಿ ಕರಡು ಪ್ರತಿ ನಮ್ಮ ಕೈಸೇರಿದೆ ಎಂದರು. ಈ ಕುರಿತು ಸುದೀೀರ್ಘ ಚರ್ಚೆ ನಡೆಯಿತು.

ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಡಿ ಬಂದ 2 ಕೋಟಿ ರೂ. ಅನುದಾನದ ವಿವರ ಕೇಳಿದರೆ ಈವರೆಗೆ ಪ.ಪಂ. ಸಭೆಗೆ ಕೆ.ಐ.ಆರ್.ಡಿ.ಎಲ್. ಮುಖ್ಯ ಇಂಜಿನಿಯರ್ ಹಾಜರಾಗಿಲ್ಲ. ಏಳು ವರ್ಷಗಳಿಂದ ಕಾಮಗಾರಿ ಪಟ್ಟಿ ನೀಡಿಲ್ಲ ಎಂಬ ಆಕ್ರೋಶ ವ್ಯಕ್ತವಾಯಿತು.

ಮಾಜಿ ಐಐ ಅಧ್ಯಕ್ಷೆ ರಜನಿ ಕುಡ್ವ ಮಾತನಾಡಿ, ರಾತ್ರಿ ಪಾಳಯದಲ್ಲಿರುವ ಮೆಸ್ಕಾಂ ಅಧಿಕಾರಿಗಳು ಕರೆಗೆ ಸ್ಪಂದಿಸುತ್ತಿಲ್ಲ. ಉಡಾೆಯಾಗಿ ಉತ್ತರಿಸುತ್ತಾರೆ ಎಂದು ದೂರಿದರು. ಈ ಕುರಿತು ತಕ್ಷಣ ಕ್ರಮ ಕೈಗೊಳ್ಳುವುದಾಗಿ ಮೆಸ್ಕಾಂ ಇಲಾಖೆ ಎಇ ಬೂಬ ಶೆಟ್ಟಿ ತಿಳಿಸಿದರು.

ಮುಖ್ಯಾಧಿಕಾರಿ ರಾಜೇಶ್ ಕೆ., ಉಪಾಧ್ಯಕ್ಷೆ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ್, ಮುಡಾ ಎಡಿಎ ಪ್ರವೀಣ್, ಇಂಜಿನಿಯರ್ ಮೋಕ್ಷಾ, ಸದಸ್ಯರು, ನಾಮನಿರ್ದೇಶಿತ ಸದಸ್ಯರು, ಆರೋಗ್ಯ ಇಲಾಖೆ ನಿರೀಕ್ಷಣಾಧಿಕಾರಿ ರಕ್ಷಿತ್ ಉಪಸ್ಥಿತರಿದ್ದರು.

ಮೇ 10 ಇ-ಖಾತೆ ಮಾಡಿಸಲು ಕೊನೆ ದಿನ

ಈಗಾಗಲೆ ಸರ್ಕಾರದಿಂದ ಅನಧಿಕೃತ ಕಟ್ಟಡ, ನಿವೇಶನಗಳಿಗೆ ಬಿ ಖಾತಾ, ಇ-ಖಾತಾ ಮಾಡಿಸಲು ಮೇ 10 ಕೊನೆಯ ದಿನಾಂಕವಾಗಿದೆ. ಪಟ್ಟಣ ವ್ಯಾಪ್ತಿಯವರು ತಕ್ಷಣವೇ ಕಚೇರಿಗೆ ಬಂದು ಇ-ಖಾತಾ ಮಾಡಿಸಬೇಕು ಎಂದು ಪ.ಪಂ. ಅಧ್ಯಕ್ಷ ಜಯಾನಂದ ಗೌಡ ತಿಳಿಸಿದರು.

ಡೆಂಘೆ ಹೈ ಅಲರ್ಟ್ ಇದೆ. ತಾಲೂಕಿನ ಚಾರ್ಮಾಡಿ, ಪುದುವೆಟ್ಟು ಸುತ್ತಮುತ್ತ ಇತರೆಡೆ ಸೇರಿ 3 ಪಾಸಿಟಿವ್ ಪ್ರಕರಣ ಕಂಡುಬಂದಿವೆ. ಸಿಬ್ಬಂದಿ ಕೊರತೆಯಿದ್ದು, ಮೊದಲ ಮತ್ತು ಕೊನೆಯ ಶುಕ್ರವಾರ ಲಾರ್ವ ಸರ್ವೇ ನಡೆಸಲಾಗುತ್ತಿದೆ. ಶವಗಾರದ ವಿಚಾರವಾಗಿ ಲಿಖಿತ ಮಾಹಿತಿ ಒದಗಿಸಲಾಗುವುದು. ರಕ್ಷಿತ್, ಆರೋಗ್ಯ ಇಲಾಖೆ ನಿರೀಕ್ಷಣಾಧಿಕಾರಿ

ಜಂಟಿ ಕಾರ್ಯಾಚರಣೆಗೆ ಆಗ್ರಹ

ಪಟ್ಟಣದಲ್ಲಿ ತೆರೆದ ಚರಂಡಿಯಲ್ಲಿ ಕೊಳಚೆ ನೀರು ಹರಿಯುತ್ತಿದೆ. ಶವಗಾರ ಶೀತಲೀಕರಣ ಯಂತ್ರ, ಶವಗಾರದ ಉನ್ನತೀಕರಣಕ್ಕೆ ಸಾಕಷ್ಟು ಬಾರಿ ಮನವಿ ನೀಡಲಾಗಿದೆ. ಇದರ ಸ್ಥಿತಿಗತಿ ಏನಿದೆ ಎಂದು ಪ್ರಶ್ನಿಸಿದರು. ಜತೆಗೆ ಆರೋಗ್ಯ ಇಲಾಖೆ, ಪ.ಪಂ. ಜತೆಗೂಡಿ ಕಾರ್ಯಾಚರಣೆ ಮಾಡಬೇಕು ಎಂಬ ಒತ್ತಾಯ ಸಭೆಯಲ್ಲಿ ಕೇಳಿಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net