ಸರ್ಕಾರದಿಂದ ಹಸಿವು ನೀಗಿಸುವ ಕಾರ್ಯ : ಸಚಿವ ದಿನೇಶ್ ಗುಂಡೂರಾವ್ ಮಾಹಿತಿ

New Project (34)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಜನರ ತೆರಿಗೆಯ ಹಣವನ್ನು ಜನರಿಗೆ ನೀಡುವುದು ಸರ್ಕಾರದ ಜವಾಬ್ದಾರಿ. ಬಡ ಜನರ ಬದುಕು ಬೆಳಗಿ ಸಮಾನ ಸಮಾಜ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಅನೇಕ ಜನಪರ ಕೆಲಸಗಳನ್ನು ಮಾಡುತ್ತಾ ಬಂದಿದೆ. ಇಂದಿರಾ ಕ್ಯಾಂಟಿನ್ ಮೂಲಕ ಹಲವರ ಹಸಿವು ತಣಿಸುವ ಕೆಲಸ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಬೆಳ್ತಂಗಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಇಂದಿರಾ ಕ್ಯಾಂಟೀನ್ ಹಾಗೂ 94 ಸಿ ಹಾಗೂ 94 ಸಿಸಿ ಹಕ್ಕುಪತ್ರಗಳ ವಿತರಣಾ ಕಾರ್ಯಕ್ರಮ ಶನಿವಾರ ಉದ್ಘಾಟಿಸಿ ಮಾತನಾಡಿದರು.

ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ, ಕೂಲಿ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳ ಹೊಟ್ಟೆ ತುಂಬಿಸುವ ಕೆಲಸವನ್ನು ಇಂದಿರಾ ಕ್ಯಾಂಟಿನ್ ಮಾಡಿದೆ. ಯಾವುದೇ ಸರ್ಕಾರ ಬಂದರೂ ಬಡ ಜನರನ್ನು ಮುಖ್ಯ ವಾಹಿನಿಗೆ ತರುವುದು ಮುಖ್ಯ ಉದ್ದೇಶವಾಗಬೇಕು ಎಂದರು.

ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಅಧ್ಯಕ್ಷ ಕೆ.ಹರೀಶ್ ಕುಮಾರ್, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಡಿ.ಎಸ್.ಗಟ್ಟಿ, ರಾಜ್ಯ ಬೀಜ ಹಾಗೂ ಸಾವಯವ ಪ್ರಮಾಣೀಕರಣ ಸಂಸ್ಥೆ ಅಧ್ಯಕ್ಷೆ ಲಾವಣ್ಯಾ ಬಲ್ಲಾಳ್ ಜೈನ್, ಕರ್ನಾಟಕ ಪರಿಸರ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೋ, ಪಪಂ ಅಧ್ಯಕ್ಷ ಜಯಾನಂದ ಗೌಡ ಟಿ., ಉಪಾಧ್ಯಕ್ಷೆ ಗೌರಿ, ಗ್ಯಾರಂಟಿ ಯೋಜನೆ ಜಿಲ್ಲಾ ಉಪಾಧ್ಯಕ್ಷ ಶೇಖರ ಕುಕ್ಕೇಡಿ, ತಾಲೂಕು ಅಧ್ಯಕ್ಷ ಪದ್ಮನಾಭ ಸಾಲ್ಯಾನ್, ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಕುಮಾರ್, ತಹಸೀಲ್ದಾರ್ ಪೃಥ್ವಿ ಸಾನಿಕಂ, ಪಪಂ ಮುಖ್ಯಾಧಿಕಾರಿ ರಾಜೇಶ್ ಉಪಸ್ಥಿತರಿದ್ದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಸ್ವಾಗತಿಸಿದರು. ಶಿಕ್ಷಕ ಧರಣೇಂದ್ರ ಕುಮಾರ್ ನಿರೂಪಿಸಿದರು. ತಹಸೀಲ್ದಾರ್ ಪೃಥ್ವಿಸಾನಿಕಂ, ಪಪಂ ಮುಖ್ಯಾಧಿಕಾರಿ ರಾಜೇಶ್ ಸಹಕರಿಸಿದರು.

ವಿವಿಧ ಸೌಕರ್ಯಗಳ ಉದ್ಘಾಟನೆ

ಸಚಿವ ದಿನೇಶ್ ಗುಂಡೂರಾವ್ ಪುಂಜಾಲಕಟ್ಟೆಯಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ, ಮಾಲಾಡಿ ಸಬರ ಬೈಲಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಉದ್ಘಾಟಿಸಿದರು. ಕಾಶಿಬೆಟ್ಟುವಿನಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಹಾಗೂ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ ಶಿಲಾನ್ಯಾಸ ನೆರವೇರಿಸಿದರು. 140 ಫಲಾನುಭವಿಗಳಿಗೆ 94 ಸಿ ಹಾಗೂ 94 ಸಿಸಿ ಹಕ್ಕು ಪತ್ರ ವಿತರಿಸಿದರು.

ಇಂದಿರಾ ಗಾಂಧಿಯವರು ಬಡವರ ಬಗ್ಗೆ ಅಪಾರ ಕಾಳಜಿ ಬೆಳೆಸಿಕೊಂಡವರಾಗಿದ್ದರು. ಹಾಗಾಗಿಯೇ ಸರ್ಕಾರದ ಅನೇಕ ಯೋಜನೆಗಳ ಹಿಂದೆ ಅವರ ಹೆಸರಿದೆ. 5 ಕೆಜಿ ಅಕ್ಕಿಯ ಜತೆ ಇಂದಿರಾ ಕಿಟ್ ಕೊಡುವ ಕಾರ್ಯವೂ ಒಂದೆರಡು ತಿಂಗಳ ಒಳಗಾಗಿ ಜಾರಿಗೆ ಬರಲಿದೆ. ಆ ಮೂಲಕ ಮನೆಯೊಂದಕ್ಕೆ ಅಗತ್ಯ ವಸ್ತುಗಳು ದೊರೆತು ಜನ ನೆಮ್ಮದಿಯ ಜೀವನಕ್ಕೆ ಸಾಕಾರವಾಗಲಿದೆ. ದಿನೇಶ್ ಗುಂಡೂರಾವ್ ಜಿಲ್ಲಾ ಉಸ್ತುವಾರಿ ಸಚಿವ https://www.vijayavani.net/english-medium-not-started-despite-permission https://www.vijayavani.net/former-mizoram-governor-kummanam-rajasekharan-visits-ashram

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net