ಯುವತಿಯ ಸಾವಿಗೆ ಕಾರಣವಾಗಿದ್ದ ಅಪಘಾತ ಪ್ರಕರಣದಲ್ಲಿ ಟೆಂಪೋ ಚಾಲಕನಿಗೆ ಸಜೆ

MNG -22 -OCT -DK DISTRICT COURT1
Published on

ಮಂಗಳೂರು: ಪಾನಮತ್ತನಾಗಿ ನಿರ್ಲಕ್ಷ್ಯದ  ಚಾಲನೆ ನಡೆಸಿ, ಯುವತಿಯೊಬ್ಬಳ ಸಾವಿಗೆ ಕಾರಣವಾದ ಆರೋಪ ನಾಲ್ಕನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗೆ ಒಂದು ವರ್ಷ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಹಳೇ ಹುಬ್ಬಳ್ಳಿ ಜಂಗಲೀಪೇಟೆ ನಿವಾಸಿ ಸುಮಿಯ್ ಮೊರಾಬ್ (28) ಶಿಕ್ಷೆಗೊಳಗಾದ ಅಪರಾಧಿ. ಅಪಘಾತದಲ್ಲಿ ಬೆಳ್ತಂಗಡಿ ನಿವಾಸಿ ಅಶ್ವಿನಿ (23) ಎಂಬವರು ಮೃತಪಟ್ಟಿದ್ದರು.

ಪ್ರಕರಣ ವಿವರ: 2017ರ ಫೆ.28ರಂದು ಸಂಜೆ 4.15ರ ವೇಳೆಗೆ ಅಬೂಬಕ್ಕರ್ ಅವರು ತನ್ನ ಆಟೋರಿಕ್ಷಾದಲ್ಲಿ ತನ್ನ ಮಗಳಾದ ಸುಮಯ, ಮಗ ಮೊಹಮ್ಮದ್ ಷಾನ್ ಮತ್ತು ಪ್ರಯಾಣಿಕರಾದ ಅಶ್ವಿನಿ (23) ಜತೆ ಬೆಳ್ತಂಗಡಿಯಿಂದ ಉಜಿರೆಗೆ ತೆರಳುತ್ತಿದ್ದರು. ಈ ಸಂದರ್ಭ ಕಡೂರು-ಬಂಟ್ವಾಳ ಹೆದ್ದಾರಿಯ ಬೆಳ್ತಂಗಡಿ ಹೆಚ್.ಬಿ. ಪೆಟ್ರೋಲ್ ಬಂಕ್ ಬಳಿ ಅಬೂಬಕ್ಕರ್ ಚಲಾಯಿಸುತ್ತಿದ್ದ ಟೆಂಪೋ ರಿಕ್ಷಾಕ್ಕೆ ಡಿಕ್ಕಿಯಾಗಿತ್ತು. ಇದರಿಂದ ರಿಕ್ಷಾ ಪಲ್ಟಿಯಾಗಿ ಬಿದ್ದಿದ್ದು, ಟೆಂಪೋ ಚಾಲಕ ಮೊರಾಬ್ ವಾಹನ ಸಹಿತ ಸ್ಥಳದಿಂದ ಪರಾರಿಯಾಗಿದ್ದ. ಅಪಘಾತದಿಂದ ಅಶ್ವಿನಿ ಅವರು ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಲಿಸದೆ ಮೃತಪಟ್ಟಿದ್ದರು. ಉಳಿದಂತೆ ಅಬೂಬಕ್ಕರ್ ಮತ್ತು ಇಬ್ಬರು ಮಕ್ಕಳಿಗೆ ಸಣ್ಣ-ಪುಟ್ಟ ಗಾಯವಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು.

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಸುಮಿಯ್‌ನನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣವನ್ನು ನಾಲ್ಕನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಯದ ನ್ಯಾಯಾಧೀಶರಾದ ಟಿ.ಪಿ. ರಾಮಲಿಂಗೇ ಗೌಡ ಸಮಗ್ರ ವಿಚಾರಣೆ ನಡೆಸಿ ಅಪರಾಧವನ್ನು ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ.

ಶಿಕ್ಷೆ ಪ್ರಮಾಣ: ಅಪರಾಧಿಗೆ ಭಾರತೀಯ ದಂಡಸಂಹಿತೆ ಕಲಂ 304ಎ (ನಿರ್ಲಕ್ಷ್ಯದ ಚಾಲನೆ) ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ರೂ. ದಂಡ, ದಂಡ ಕಟ್ಟಲು ವಿಲವಾದಲ್ಲಿ 1 ತಿಂಗಳ ಸಜೆ, ಐಪಿಸಿ 279ರಡಿ (ಸಾರ್ವಜನಿಕ ಸ್ಥಳದಲ್ಲಿ  ಮಾನವ ಜೀವಕ್ಕೆ ಅಪಾಯ ರೀತಿ ಚಾಲನೆ) 3 ತಿಂಗಳು ಸಾದಾ ಸಜೆ, 1 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 15 ದಿನ ಕಾರಾಗೃಹ ಶಿಕ್ಷೆ, ಐಪಿಸಿ 337(ಸಾದಾ ಗಾಯ)ರಡಿ 3 ತಿಂಗಳು ಸಜೆ, 500 ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
  ಸಂತ್ರಸ್ತರ ಪರವಾಗಿ ಸರ್ಕಾರಿ ಅಭಿಯೋಜಕ ಹರಿಶ್ಚಂದ್ರ ಉದ್ಯಾವರ ವಾದ ಮಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net