

ಮಂಗಳೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಎಸ್‌ಡಿಎಂ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆಯವರ 75ನೇ ವರ್ಷದ ಜನ್ಮದಿನವನ್ನು ಎಸ್‌ಡಿಎಂ ಡಿಎಲ್‌ಇಡಿ ಕಾಲೇಜಿನಲ್ಲಿ ಶನಿವಾರ ಆಚರಿಸಲಾಯಿತು.
ಎಸ್‌ಡಿಎಂ ಶಿಕ್ಷಣ ಸಂಸ್ಥೆ ಉಜಿರೆಯ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಬಿ.ಸೋಮಶೇಖರ ಶೆಟ್ಟಿ ಮಾತನಾಡಿ, ಡಾ.ಹೆಗ್ಗಡೆಯವರು ಕಡಿಮೆ ವೆಚ್ಚದಲ್ಲಿ ಎಲ್‌ಕೆಜಿಯಿಂದ ಉನ್ನತ ಶಿಕ್ಷಣದವರೆಗೆ ವಿದ್ಯಾದಾನ ಮಾಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಅವರ್ಣನೀಯ ಎಂದರು.
ಸಂಸ್ಥೆ ಪ್ರಾಂಶುಪಾಲ ಸ್ವಾಮಿ ಕೆ.ಎ. ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ಹೆಗ್ಗಡೆಯವರು ದೂರದೃಷ್ಟಿಯುಳ್ಳವರು, ಅಧ್ಯಾತ್ಮ ಚಿಂತಕರು, ಅಭಿವೃದ್ಧಿಯ ಹರಿಕಾರ. ಅವರ ಮಾರ್ಗದರ್ಶನದಡಿ ನಾವೆಲ್ಲ ಕೆಲಸ ನಿರ್ವಹಿಸುತ್ತಿರುವುದು ನಮಗೆ ಹೆಮ್ಮೆ ಎಂದರು.
ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ ಆಶುಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಡಿಇಲ್‌ಇಡಿ ಪ್ರಶಿಕ್ಷಣಾರ್ಥಿ ಯತೀಕ್ಷಾ ಪ್ರಥಮ ಹಾಗೂ ಪ್ರಥಮ ಡಿಇಲ್‌ಇಡಿ ಪ್ರಶಿಕ್ಷಣಾರ್ಥಿ ಅಂಬಿಕಾ ದ್ವಿತೀಯ ಬಹುಮಾನ ಪಡೆದರು. ‘ಶಿಕ್ಷಣ ಕ್ಷೇತ್ರಕ್ಕೆ ಪೂಜ್ಯ ಖಾವಂದರರ ಕೊಡುಗೆಗಳು’ ವಿಷಯದಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಡಿಇಲ್‌ಇಡಿ ಪ್ರಶಿಕ್ಷಣಾರ್ಥಿಗಳಾದ ಅನುಷಾ ಪ್ರಥಮ ಮತ್ತು ಮುಜೈನಾ ದ್ವಿತೀಯ ಬಹುಮಾನ ಪಡೆದರು.
ಉಪನ್ಯಾಸಕ ವೃಂದ ಹಾಗೂ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು. ಜಲಜಾಕ್ಷಿ ಸ್ವಾಗತಿಸಿದರು. ಆರತಿ ವಂದಿಸಿದರು. ಅಶ್ವಿನಿ ಪಿ.ಎಚ್. ನಿರೂಪಿಸಿದರು.