

ಮಂಗಳೂರು: ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಮಂಗಳವಾರ ಕುಸಿದಿದ್ದು ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಭಯದಿಂದ ಪಾಠ ಕೇಳುವಂತಾಗಿದೆ.
ಸುಮಾರು 75 ವರ್ಷ ಹಳೆಯದಾದ ಈ ಶಾಲೆಯಲ್ಲಿ ಈಗ 160ಕ್ಕೂ ಮಕ್ಕಳು ಓದುತ್ತಿದ್ದಾರೆ. ಆದರೆ ಇಲ್ಲಿನ ಕಟ್ಟಡಗಳು ಶಿಥಿಲಗೊಂಡಿದ್ದು ಈ ಬಗ್ಗೆ ಮೊದಲೇ ಸಂಬಂಧಪಟ್ಟವರ ಗಮನಕ್ಕೆ ತರಲಾಗಿತ್ತು. ಆದರೂ ಈ ಬಗ್ಗೆ ಯಾರೂ ಗಮನ ಹರಿಸದ ಕಾರಣ ಶಿಥಿಲಗೊಂಡಿದ್ದ ಕಟ್ಟಡದ ಮಾಡಿನ ರೀಪುಗಳು ಮಂಗಳವಾರ ತುಂಡಾಗಿ ಬಿದ್ದಿವೆ. ಇದರಿಂದ ರೀಪಿನ ಆಧಾರದಲ್ಲಿದ್ದ ಹಂಚುಗಳು ಕಟ್ಟಡದೊಳಗೆ ಬಿದ್ದಿದ್ದು ಮಕ್ಕಳ ಆ ಸಮಯದಲ್ಲಿ ಇರದ ಕಾರಣ ಸಂಭಾವ್ಯ ಅಪಾಯ ತಪ್ಪಿದೆ.
ಘಟನೆಯ ಬಳಿಕ ಮಂಗಳವಾರ ಇಲ್ಲಿಗೆ ಬೆಳ್ತಂಗಡಿ ತಾಲೂಕು ಶಿಕ್ಷಣ ಇಲಾಖೆಯಿಂದ ಇಸಿಒಗಳಾದ ಸಿದ್ದಲಿಂಗ ಸ್ವಾಮಿ ಹಾಗೂ ಚೇತನಾಕ್ಷಿ, ಹಾಗೂ ಕ್ಲಸ್ಟರ್ ಸಿಆರ್ಪಿ ಆರತಿ ಭೇಟಿ ನೀಡಿ ಕುಸಿತಗೊಂಡಿದ್ದ ಶಾಲಾ ಮೇಲ್ಚಾವಣಿ ಪರಿಶೀಲಿಸಿದ್ದಾರೆ. ಇದೇ ವೇಳೆ ಶಾಲೆಯ ಕೊಠಡಿಯ ಅಲ್ಲಲ್ಲಿ ಮಳೆ ನೀರು ಸೋರಿಕೆಯಾಗುತ್ತಿರುವ ಬಗ್ಗೆ ಅವರ ಗಮನಕ್ಕೆ ತರಲಾಗಿದ್ದು ಆ ಕೊಠಡಿಗಳನ್ನೂ ವೀಕ್ಷಿಸಿದ್ದಾರೆ. ಶಾಲೆಯಿಂದ ಬಂದಿರುವ ಕೊಠಡಿ ದುರಸ್ಥಿಯ ಅರ್ಜಿಗಳನ್ನು ಪರಿಶೀಲಿಸಿದ್ದು ಅದನ್ನು ಮುಂದಿನ ಕ್ರಮಕ್ಕಾಗಿ ಮೇಲಧಿಕಾರಿಗಳಿಗೆ ರವಾನಿಸಿರುವುದಾಗಿ ತಿಳಿಸಿದರು. ಛಾವಣಿ ಕುಸಿತದಿಂದ ತೊಂದರೆ ಉಂಟಾಗಿದ್ದು, ತರಗತಿ ಕೊಠಡಿಗಳು ಸಾಕಾಗದ ಕಾರಣ ಒಂದೊಂದು ಕೊಠಡಿಯಲ್ಲಿ ಎರಡೆರಡು ತರಗತಿಯ ವಿದ್ಯಾರ್ಥಿಗಳನ್ನು ಕುಳ್ಳಿರಿಸಿ ಪಾಠ ಪ್ರವಚನ ಮಾಡುತ್ತಿರುವುದರ ಬಗ್ಗೆ ಶಿಕ್ಷಕರು ಇಲಾಖಾ ಅಧಿಕಾರಿಗಳ ಗಮನಕ್ಕೆ ತಂದರು. ಮಕ್ಕಳು ಕುಳಿತುಕೊಳ್ಳಲು ಬೇಕಾದ ಪರ್ಯಾಯ ವ್ಯವಸ್ಥೆಯ ಬಗ್ಗೆಯೂ ಚರ್ಚಿಸಲಾಯಿತು. ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು, ಹಳೇ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರ ಭೇಟಿ
ಘಟನೆಯ ಬಳಿಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ತಾತ್ಕಾಲಿಕವಾಗಿ ಶೀಟು ಹಾಕಿಸಿ ಮಕ್ಕಳು ಮಳೆ ನೀರಿನಲ್ಲಿ ತೋಯದಂತೆ ಪಾಠ ಕೇಳಲು ವ್ಯವಸ್ಥೆ ಮಾಡುವ ಬಗ್ಗೆ ಅವರು ಭರವಸೆ ನೀಡಿದರು.
ಮರು ರಿಪೇರಿ ಸಾಧ್ಯವೇ?
ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದಾಗ ಮರು ರಿಪೇರಿ ಮಾಡುವ ಬಗ್ಗೆ ಚರ್ಚೆ ನಡೆಯಿತು. ಆದರೆ ಹಳೆಯ , ಶಿಥಿಲಗೊಂಡಿರುವ ಈ ಕಟ್ಟಡದ ಮರು ರಿಪೇರಿಗೆ ಯೋಗ್ಯವೇ ಎಂಬ ಪ್ರಶ್ನೆ ಎದ್ದಿದೆ. ಕಟ್ಟಡದ ಧಾರಣಾ ಸಾಮರ್ಥ್ಯ ಪರಿಶೀಲಿಸಿಯೇ ರಿಪೇರಿ ಬಗ್ಗೆ ಚರ್ಚೆ ನಡೆಸಬೇಕಾದ ಅನಿವಾರ್ಯತೆ ಬಗ್ಗೆ ಹಿರಿಯ ವಿದ್ಯಾರ್ಥಿಗಳು ಸಲಹೆ ನೀಡಿದ್ದಾರೆ.
ವಿಜಯವಾಣಿ ಎಚ್ಚರಿಸಿತ್ತು
ಶಿಥಿಲಗೊಂಡಿದ್ದ ಶಾಲಾ ಕಟ್ಟಡದ ಬಗ್ಗೆ ವಿಶೇಷ ವರದಿ ಪ್ರಕಟಿಸಿದ ವಿಜಯವಾಣಿ ಈ ಹಿಂದೆಯೇ ಎಚ್ಚರಿಸಿತ್ತು. ಈ ಶಾಲೆಯ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿತ್ತು. ಆಡಳಿತ ವ್ಯವಸ್ಥೆ ಆಗಲೇ ಎಚ್ಚೆತ್ತುಕೊಂಡು ಸೂಕ್ತ ವ್ಯವಸ್ಥೆ ಕಲ್ಪಿಸುತ್ತಿದ್ದರೆ ಈ ಘಟನೆ ಸಂಭವಿಸುತ್ತಿರಲಿಲ್ಲ ಎಂದು ಸ್ಥಳೀಯರು ಸ್ಮರಿಸಿಕೊಂಡಿದ್ದಾರೆ.