

ಹರಿಪ್ರಸಾದ್ ನಂದಳಿಕೆ, ಬೆಳ್ಮಣ್
ರಸ್ತೆ ಅಗೆದು ಹಾಕಿ ಮೂರು ತಿಂಗಳು ಕಳೆದರೂ ಇನ್ನೂ ಕಾಮಗಾರಿ ಆರಂಭಗೊಳ್ಳದ ಪರಿಣಾಮ ಜಲ್ಲಿ ಕಲ್ಲುಗಳಿಂದ ಕೂಡಿದ ರಸ್ತೆಯಲ್ಲಿ ವಾಹನ ಸಂಚಾರ ನಡೆಸಬೇಕಾಗಿದ್ದು ಗುತ್ತಿಗೆದಾರರ ವಿರುದ್ಧ ಗ್ರಾಮಸ್ಥರು ಆಕ್ರೋಶಿತರಾಗಿದ್ದಾರೆ.
ಬೆಳ್ಮಣ್ ಪೇಟೆಯಿಂದ ಜಂತ್ರವರೆಗಿನ ರಸ್ತೆಯ ಕಾಮಗಾರಿ 2.5 ಕೋಟಿ ರೂ. ಮಂಜೂರಾಗಿದ್ದು ಮೂರು ತಿಂಗಳ ಹಿಂದೆ ರಸ್ತೆ ಕಾಮಗಾರಿ ಆರಂಭಗೊಂಡು ತಿರುವು ರಸ್ತೆಯನ್ನು ಸಮತಟ್ಟು ಮಾಡಿ ಜಲ್ಲಿ ಕಲ್ಲುಗಳನ್ನು ಹಾಸಲಾಗಿತ್ತು. ಆ ಬಳಿಕ ಮೂರು ತಿಂಗಳು ಕಳೆದರೂ ಇನ್ನೂ ಡಾಂಬರು ಕಾಮಗಾರಿ ನಡೆಯದೆ ವಾಹನ ಸವಾರರು ನಿತ್ಯ ಸಂಕಷ್ಟ ಪಡುವಂತಾಗಿದೆ.
ಬೆಳ್ಮಣ್‌ನಿಂದ ಶಿರ್ವ ಮಾರ್ಗವಾಗಿ ಉಡುಪಿ ಸೇರಲು ಹತ್ತಿರದ ಪ್ರಮುಖ ರಸ್ತೆ ಇದಾಗಿದ್ದು ನಿತ್ಯ ನೂರಾರು ವಾಹನಗಳು ಇದೇ ರಸ್ತೆಯನ್ನು ಅವಲಂಬಿಸಿದೆ.ಬಜ್ಪೆ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದ್ದು ಈ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದ್ದರೂ ಕಾಮಗಾರಿ ಮಾತ್ರ ವಿಳಂಬಗೊಳ್ಳುತ್ತಿದ್ದು ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.
ಮಳೆಗಾಲಕ್ಕೂ ಮುನ್ನ ರಸ್ತೆ ಅಗೆದು ಹಾಕಿ ಸರಿಯಾದ ನೀರಿನ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಧೂಳಿನ ಸಮಸ್ಯೆ ಅನುಭವಿಸಿದ ಬೆಳ್ಮಣ್ ಭಾಗದ ಗ್ರಾಮಸ್ಥರು ರಸ್ತೆಯ ಕಾಮಗಾರಿ ಆರಂಭಗೊಳ್ಳದ ಹಿನ್ನೆಲೆಯಲ್ಲಿ ಹೊಂಡ ಗುಂಡಿ ತುಂಬಿದ ಅಗೆದು ಹಾಕಲಾದ ರಸ್ತೆಯಲ್ಲಿ ಸಂಚಾರ ನಡೆಸುವ ದುಸ್ತಿತಿ ಎದುರಾಗಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಲಾಕ್‌ಡೌನ್‌ನಿಂದ ಕೂಲಿ ಕಾರ್ಮಿಕರ ಕೊರತೆಯಿಂದ ರಸ್ತೆಕಾಮಗಾರಿ ವಿಳಂಬವಾಗಿದ್ದು, ಸದ್ಯ ಮಳೆ ಕಾರಣದಿಂದ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು ಇನ್ನಷ್ಟು ದಿನಗಳ ಕಾಲ ಕಾಮಗಾರಿ ವಿಳಂಬವಾಗುವ ಸಾಧ್ಯತೆಯಿದೆ.
ರಸ್ತೆಯನ್ನು ಅಗೆದು ಹಾಕಿ ಮೂರು-ನಾಲ್ಕು ತಿಂಗಳು ಕಳೆಯಿತು. ಇನ್ನೂ ಡಾಂಬರು ಹಾಕಿಲ್ಲ. ಜಲ್ಲಿ ರಸ್ತೆಯಲ್ಲಿ ನಿತ್ಯ ಸಂಚರಿಸುವ ಪರಿಸ್ಥಿತಿ ಎದುರಾಗಿದೆ.
ಸುಹಾನ್, ಸವಾರ.
ಕಾಮಗಾರಿ ವಿಳಂಬವಾಗುವುದಾದರೆ ಮಳೆಗಾಲ ಆರಂಭಗೊಳ್ಳುವ ಮುನ್ನ ರಸ್ತೆ ಅಗೆದು ಹಾಕಿದ್ದು ಯಾಕೆ.? ಸುಂದರವಾಗಿದ್ದ ರಸ್ತೆಯನ್ನು ಅಗೆದು ಹಾಕಿ ಜಲ್ಲಿ ತುಂಬಿದ ಹೊಂಡ ಗುಂಡಿಗಳಲ್ಲಿ ಸಾಗುವ ದುಸ್ಥಿತಿ ನಮಗೆ ಎದುರಾಗಿದೆ.
ಯಶವಂತ್ ಗ್ರಾಮಸ್ಥ.
ಸವಾರರಿಗೆ ತೊಂದರೆಯಾಗುವ ಬಗ್ಗೆ ಈಗಾಗಲೇ ಗುತ್ತಿಗೆದಾರರಿಗೆ ಮಾಹಿತಿ ನೀಡಲಾಗಿದೆ. ಈ ಹಿಂದೆ ಲಾಕ್‌ಡೌನ್‌ನಿಂದ ಕಾರ್ಮಿಕರ ಕೊರತೆಯಿಂದ ಸ್ವಲ್ಪ ವಿಳಂಬವಾಗಿದೆ. ಸದ್ಯ ಮಳೆ ಕಾರಣದಿಂದ ವಿಳಂಬವಾಗುತ್ತಿದೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.
ರೇಶ್ಮಾ ಉದಯ್ ಶೆಟ್ಟಿ, ಜಿಪಂ ಮಾಜಿ ಸದಸ್ಯೆ