

ಹರಿಪ್ರಸಾದ್ ನಂದಳಿಕೆ ಬೆಳ್ಮಣ್
ದೇಶದೆಲ್ಲೆಡೆ ಸ್ವಚ್ಛತೆಯ ಕೂಗು ಬಲವಾಗುತ್ತಿದ್ದು, ಪ್ರತಿ ಗ್ರಾಮಗಳಲ್ಲಿ ಸ್ವಚ್ಛತೆಗಾಗಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಕೆಲವೊಂದು ರಸ್ತೆ ಬದಿ ಪರಿಸರಗಳಲ್ಲಿ ಸಾರ್ವಜನಿಕರು ಕಸ ಬಿಸಾಡುವುದು ಇನ್ನೂ ಕಡಿಮೆಯಾಗಿಲ್ಲ. ಸಾರ್ವಜನಿಕ ಪರಿಸರದಲ್ಲಿ ಹಾಕಲಾದ ಕಸ ಶುಚಿಗೊಳಿಸುವ ಕಾರ್ಯಕ್ಕಾಗಿ ಬೆಳ್ಮಣ್‌ನಲ್ಲಿ ವಿಶೇಷ ತಂಡವೊಂದು ಸಿದ್ಧಗೊಂಡು ಸ್ವಚ್ಛತೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ.
ಕಳೆದ 20 ವಾರಗಳಿಂದ ನಿರಂತರವಾಗಿ ಕಾರ್ಕಳ ತಾಲೂಕಿನ ಬೆಳ್ಮಣ್‌ನಲ್ಲಿ ಪ್ರತಿ ಭಾನುವಾರ ಬೆಳಗ್ಗೆ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡುತ್ತಿರುವ ಬೆಳ್ಮಣ್ ಪರಿಸರದ ಸ್ವಚ್ಛತಾ ತಂಡದ ಕಾರ್ಯವೈಖರಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಸ್ವಚ್ಛತೆಯ ಬಗ್ಗೆ ಕ್ರಾಂತಿಯಾಗಬೇಕು. ಸ್ವಚ್ಛತೆ ಬಗ್ಗೆ ಸಾರ್ವಜನಿಕರಲ್ಲಿ ಪ್ರಜ್ಞೆ ಮೂಡಿಸಬೇಕು ಎಂಬ ಮಹತ್ವದ ಕಲ್ಪನೆಯಿಂದ ಗಾಂಧಿ ಜಯಂತಿಯಂದು ಸಂಕಲ್ಪ ತೊಟ್ಟ ಸಮಾನ ಮನಸ್ಕರ ತಂಡ ಪ್ರತಿ ಭಾನುವಾರ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಬೆಳ್ಮಣ್ ಆಸುಪಾಸಿನ ರಸ್ತೆ ಬದಿ, ಹೆದ್ದಾರಿ ಬದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಕಸಗಳನ್ನು ಒಟ್ಟುಗೂಡಿಸಿ ಪಂಚಾಯಿತಿ ಕಸ ವಿಲೇವಾರಿ ವಾಹನಕ್ಕೆ ತಲುಪಿಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಬೆಳ್ಮಣ್, ಪೆರಲ್‌ಪಾದೆ, ಜಂತ್ರ, ಪಿಲಾರುಖಾನ, ನಂದಳಿಕೆ ಭಾಗದಲ್ಲಿ ಹೆದ್ದಾರಿ ಪಕ್ಕದಲ್ಲಿ ಎಸೆಯಲಾಗುವ ತ್ಯಾಜ್ಯ ಸಂಗ್ರಹಿಸಿ ಸರಿಯಾಗಿ ವಿಲೇವಾರಿ ಮಾಡುತ್ತಿದ್ದಾರೆ. ಹೆಚ್ಚು ಕಸ ಎಸೆಯಲಾಗುವ ಪ್ರದೇಶದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯ ಮಾಡುತ್ತಿದ್ದಾರೆ. ಭಾನುವಾರ ರಜೆ ಸಿಕ್ಕರೆ ಸಾಕು ಮನೆಯಲ್ಲಿ ಆರಾಮವಾಗಿ ಕಾಲ ಕಳೆಯುವುದನ್ನು ಬಿಟ್ಟು ಪ್ರತಿ ಭಾನುವಾರ ವಿವಿಧ ಕಡೆಗಳಲ್ಲಿ ಸ್ವಚ್ಛತಾ ಕಾರ್ಯ ಮಾಡಲು ಬೆಳ್ಮಣ್‌ನಲ್ಲಿ ಸ್ವಚ್ಛತೆಯೇ ನಮ್ಮ ಗುರಿ ಎನ್ನುವ ವಾಟ್ಸಾಪ್ ತಂಡ ವಿಶೇಷ ಮುತುವರ್ಜಿ ವಹಿಸಿದೆ.
ದೇವರ ಕಾಡು ಪ್ರದೇಶ ಸ್ವಚ್ಛತೆ: ತಂಡದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿರುವ ಸಮಾಜ ಸೇವಕ ಬೆಳ್ಮಣ್ ಜಂತ್ರ ನಿವಾಸಿ ವಿಶ್ವನಾಥ್ ಪಾಟ್ಕರ್ ಮುತುವರ್ಜಿಯಿಂದ ಬೆಳ್ಮಣ್ ಮಂಚಕಲ್ ರಸ್ತೆಯ ಪಿಲಾರ್ ಖಾನ-ದೇವರ ಕಾಡು ಅರಣ್ಯ ಪ್ರದೇಶದಲ್ಲಿ ರಸ್ತೆ ಬದಿ ಗೋಣಿಯಲ್ಲಿ ಕಟ್ಟಿ ಎಸೆಯಲಾಗಿದ್ದ ಪ್ಲಾಸ್ಟಿಕ್ ಕಸಗಳನ್ನು, ಬಾಟಲಿಗಳನ್ನು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ತ್ಯಾಜ್ಯ ನಿರ್ವಹಣಾ ಪ್ರದೇಶಕ್ಕೆ ವಿಲೇವಾರಿ ಮಾಡಲಾಗಿದೆ. ಕಾಡು ಪ್ರದೇಶವಾಗಿದ್ದ ಜಾಗದಲ್ಲಿ ವಾಹನಗಳಲ್ಲಿ ಕಸ ತಂದು ಸುರಿಯಲಾಗುತ್ತಿದ್ದು, ಸುತ್ತಮುತ್ತ ಕಸದ ಕೊಂಪೆಯಾಗಿತ್ತು. ಇದನ್ನು ಮನಗಂಡ ಸ್ವಚ್ಛತಾ ತಂಡ ಕಾಡಿನ ಪರಿಸರವನ್ನು ಸ್ವಚ್ಛಗೊಳಿಸಿ ಎಲ್ಲರ ಪ್ರಶಂಶೆಗೆ ಪಾತ್ರವಾಗಿದೆ. ಪ್ರತಿ ವಾರ ಬೆಳಗ್ಗೆ ಸ್ವಚ್ಛತೆಯಲ್ಲಿ ತೊಡಗಿಕೊಳ್ಳುವ ಬೆಳ್ಮಣ್‌ನ ಸ್ವಚ್ಛತಾ ತಂಡದಿಂದ ಪ್ರೇರಣೆ ಇತರ ಗ್ರಾಮಗಳಿಗೆ ಮಾದರಿಯಾಗಿದೆ.
ಸಾರ್ವಜನಿಕರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸಮಾನ ಮನಸ್ಕರು ಸೇರಿ ಪ್ರತಿ ಭಾನುವಾರ ಸ್ವಚ್ಛತಾ ಕಾರ್ಯ ಮಾಡುತ್ತಿದ್ದೇವೆ. ಸಾರ್ವಜನಿಕರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವುದು ದೊಡ್ಡ ಸವಾಲಾಗಿದೆ. -ಸರ್ವಜ್ಞ ತಂತ್ರಿ, ಸ್ವಚ್ಛತಾ ತಂಡದ ರೂವಾರಿ ಬೆಳ್ಮಣ್ ಆಸುಪಾಸಿನ ರಸ್ತೆಯ ಬದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಮುಂತಾದ ಕಸವನ್ನು ಸಂಗ್ರಹಿಸಿ, ಪಂಚಾಯಿತಿ ಕಸ ವಿಲೇವರಿಯ ವಾಹನಕ್ಕೆ ತಲುಪಿಸುವ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಛತೆೆಯ ಬಗ್ಗೆ ವಿಶೇಷ ಅರಿವು ಮೂಡಿಸುತ್ತಿದ್ದಾರೆ. ಇವರ ಈ ಕಾರ್ಯ ನಿಜಕ್ಕೂ ಶ್ಲಾಘನೀಯ. -ಮಲ್ಲಿಕಾ ರಾವ್, ಮಾಜಿ ಬೆಳ್ಮಣ್ ಗ್ರಾ,ಪಂ ಅಧ್ಯಕ್ಷೆ