ನರಹಂತಕ ಹುಲಿ ಹತ್ಯೆಗೆ ಮುಂದುವರಿದ ಕಾರ್ಯಾಚರಣೆ

09 SRI 04
Published on

ಮಡಿಕೇರಿ: ದಕ್ಷಿಣ ಕೊಡಗಿನಲ್ಲಿ ಮೂವರನ್ನು ಬಲಿ ತೆಗೆದುಕೊಂಡಿರುವ ನರಹಂತಕ ಹುಲಿ ಹತ್ಯೆಗೆ 2ನೇ ದಿನವಾದ ಮಂಗಳವಾರವೂ ಕಾರ್ಯಾಚರಣೆ ನಡೆಯಿತು. ಸೋಮವಾರ ಸಂಜೆ ಬೆಳ್ಳೂರು ಗ್ರಾಮದ ಕೆರೆಯಲ್ಲಿ ಹುಲಿ ಮುಖಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಕ್ಕಿರುವ ಮಾಹಿತಿ ನೀಡಲಾಗಿತ್ತು. ಆದರೆ, ಹುಲಿ ಮೃತದೇಹ ಮಾತ್ರ ಪತ್ತೆಯಾಗಿಲ್ಲ.

ಶಾರ್ಪ್ ಶೂಟರ್ ಗಳೊಂದಿಗೆ ಅರಣ್ಯಾಧಿಕಾರಿ, ಸಿಬ್ಬಂದಿ, ಕ್ಷಿಪ್ರ ಕಾರ್ಯಾಚರಣೆ ತಂಡದವರು ನರಹಂತಕ ಹುಲಿ ಬೇಟೆಯಲ್ಲಿ ಕಾರ್ಯೋನ್ಮುಖರಾಗಿದ್ದರು. ಮಂಗಳವಾರ ನರಹಂತಕ ಹುಲ್ಲಿ ಕೊಲ್ಲದಿದ್ದಲ್ಲಿ ಬುಧವಾರ ಗೋಣಿಕೊಪ್ಪ- ಮೈಸೂರು ಮಾರ್ಗದ ಮತ್ತಿಗೋಡಿನಲ್ಲಿ ರಸ್ತೆತಡೆ ಪ್ರತಿಭಟನೆ ಮಾಡಲು ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ.

ಹೆದ್ದಾರಿ ತಡೆ ಪ್ರತಿಭಟನೆಯೊಂದಿಗೆ ತಿತಿಮತಿ ಎಸಿಎಫ್ ಕಚೇರಿಗೆ ಬೀಗ ಹಾಕಲು ಪ್ರತಿಭಟನಾಕಾರರು ತೀರ್ಮಾನಿಸಿದ್ದಾರೆ. ಪೊನ್ನಂಪೇಟೆಯಲ್ಲಿರುವ ಕಾನೂರು ಜಂಕ್ಷನ್ ನಿಂದ ತಿತಿಮತಿ ಸಮೀಪದ ಮತ್ತಿಗೋಡಿನವರೆಗೂ ವಾಹನ ಜಾಥಾ ನಡೆಸಲಾಗುತ್ತದೆ. ಬುಧವಾರವೂ ಹುಲಿ ಕೊಲ್ಲಲು ಸಾಧ್ಯವಾಗದಿದ್ದಲ್ಲಿ ಗುರುವಾರ ಪೊನ್ನಂಪೇಟೆ ತಾಲೂಕು ಬಂದ್ ಮಾಡಲು ನಿರ್ಧರಿಸಲಾಗಿದೆ.

ಸೋಮವಾರ ಹುಲಿ ದಾಳಿಗೆ ಒಳಗಾಗಿ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿರುವ ಗುಂಡ್ಲುಪೇಟೆ ತಾಲೂಕಿನ ಬೇಗೂರು ನಿವಾಸಿ ಕೆಂಚಶೆಟ್ಟಿ ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ವೈದ್ಯರು ಹಾಗೂ ಪುತ್ರನೊಂದಿಗೆ ಮಾತನಾಡಿದ್ದಾರೆಂದು ಅರಣ್ಯ ಇಲಾಖೆ ಮೂಲದಿಂದ ಮಾಹಿತಿ ಲಭ್ಯವಾಗಿದೆ.

ಮಂಗಳವಾರ ಮಧ್ಯಾಹ್ನ ಕೆ.ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ ಗ್ರಾಮದ ಪನ್ಯ ಎಸ್ಟೇಟ್ನಲ್ಲಿ ಹುಲಿ ದಾಳಿಗೆ ಕರು ಸಾವನ್ನಪ್ಪಿದೆ. ಮಧ್ಯಾಹ್ನ ವೇಳೆ ಹುಲಿ ಕರವನ್ನು ಕೊಂಡೊಯ್ಯುತ್ತಿದ್ದ ವೇಳೆ ಕಾರ್ಮಿಕರು ಬೊಬ್ಬೆ ಹಾಕಿ, ಹುಲಿ ಓಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net