ಅಖಂಡ ಬಳ್ಳಾರಿ ಜಿಲ್ಲೆ ವಿಭಜಿಸಿದರೆ ಕಾನೂನಾತ್ಮಕ ಹೋರಾಟ: ಸರ್ಕಾರಕ್ಕೆ ಸಮಿತಿ ಸದಸ್ಯ ಕುಡತಿನಿ ಶ್ರೀನಿವಾಸ ಎಚ್ಚರಿಕೆ

17012021 Bellary Kudatini Srinivas
Published on

ಬಳ್ಳಾರಿ: ಜಿಲ್ಲೆ ವಿಭಜನೆ ವಿರೋಧಿಸಿ ಹೋರಾಟ ನಡೆಸಲಾಗುತ್ತಿದೆ. ಇದನ್ನು ಕಡೆಗಣಿಸಿ ಸರ್ಕಾರ ವಿಜಯನಗರ ಜಿಲ್ಲೆ ಘೋಷಿಸಿದರೆ ಕಾನೂನಾತ್ಮಕ ಹೋರಾಟ ನಡೆಸುವುದಾಗಿ ಅಖಂಡ ಜಿಲ್ಲಾ ಹೋರಾಟ ಸಮಿತಿ ಸದಸ್ಯ ಕುಡತಿನಿ ಶ್ರೀನಿವಾಸ ಎಚ್ಚರಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 2019ರಲ್ಲಿ ಸರ್ಕಾರ ವಿಜಯನಗರ ಜಿಲ್ಲೆ ಘೋಷಿಸಿತು. ಅಂದಿನಿಂದ ಈವರೆಗೆ ಬಳ್ಳಾರಿ ಜಿಲ್ಲೆ ವಿಭಜನೆ ವಿರೋಧಿಸಿ ಬಂದ್, ಪ್ರತಿಭಟನೆ, ಹೋರಾಟದ ಜತೆಗೆ ಕಂದಾಯ ಇಲಾಖೆಗೆ ಹಲವು ಅಕ್ಷೆಪಣೆಗಳನ್ನು ಸಲ್ಲಿಸಲಾಗಿದೆ. ಆದಾಗ್ಯೂ ಸರ್ಕಾರ ವಿಜಯನಗರ ಜಿಲ್ಲೆ ರಚನೆಯ ಅಧಿಕೃತ ಅಧಿಸೂಚನೆ ಹೊರಡಿಸಿದರೆ ಸುಪ್ರೀಂಕೋರ್ಟ್ ಮೆಟ್ಟಿಲೇರಲಾಗುವುದು ಎಂದರು.

ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಭೇಟಿ ನೀಡಿದ್ದೇವೆ. ಸ್ಥಳೀಯ ಶಾಸಕರಿಗೂ ಜಿಲ್ಲೆ ವಿಭಜನೆ ಇಷ್ಟವಿಲ್ಲ. ಹೊಸಪೇಟೆ ಹೊರತುಪಡಿಸಿ ಪಶ್ಚಿಮ ತಾಲೂಕುಗಳ ಪೈಕಿ ಒಂದನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು ಎಂದಿದ್ದಾರೆ. ಅದರೆ ಅನಂದ ಸಿಂಗ್‌ರ ಸ್ವಾರ್ಥಕ್ಕಾಗಿ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡು ಜಿಲ್ಲೆ ವಿಭಜನೆಗೆ ಮುಂದಾಗಿದೆ. ಸಚಿವ ಶ್ರೀರಾಮುಲು ಸಹ ಮೊಳಕಾಲ್ಮೂರು ತಾಲೂಕನ್ನು ಬಳ್ಳಾರಿಗೆ ಸೇರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕರವೇ ಜಿಲ್ಲಾ ಅಧ್ಯಕ್ಷ ಚಾನಳ್ ಶೇಖರ್ ಮಾತನಾಡಿ, ಜಿಲ್ಲೆಯ ಗಡಿಯಲ್ಲಿರುವ ಆಂಧ್ರದ ಅಲೂರು, ಆದೋನಿ, ಹೊಳಗುಂದದಲ್ಲಿ ಬಳ್ಳಾರಿಯನ್ನು ಆಂಧ್ರಕ್ಕೆ ಸೇರಿಸಲು ಕೆಲವರು ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಸಮಿತಿ ಸದಸ್ಯರಾದ ದರೂರು ಪುರುಷೋತ್ತಮ ಗೌಡ, ಸಿದ್ಮಲ್ ಮಂಜುನಾಥ್, ಗಂಗಾವತಿ ವೀರೇಶ್, ಜಗದೀಶ್ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net