ಬಳ್ಳಾರಿ : ಮದ್ಯ ಕೇವಲ ವ್ಯಕ್ತಿ ಮೇಲೆ ಪರಿಣಾಮ ಬೀರದೇ ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತದೆ. ಹಾಗಾಗಿ ಮದ್ಯ ಮತ್ತು ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಗ್ರಾಪಂ ಅಧ್ಯಕ್ಷೆ ವಿ.ಗೋವಿಂದಮ್ಮ ನಾಗಿರೆಡ್ಡಿ ಹೇಳಿದರು.
ತಾಲೂಕಿನ ಸಂಗನಕಲ್ಲು ಗ್ರಾಮದಲ್ಲಿ ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದೊಂದಿಗೆ ಮದ್ಯ ಮತ್ತು ಮಾದಕಗಳಿಂದಾಗುವ ದುಷ್ಪರಿಣಾಮಗಳ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಜಾಗೃತಿ ಗೀತೆಗಳ ಕಾರ್ಯಕ್ರಮಕ್ಕೆ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಸಮಾಜ ಕಟ್ಟುವಲ್ಲಿ ಯುವಕರ ಪಾತ್ರ ಬಹಳ ಮುಖ್ಯವಾದದ್ದು, ಆದರೆ ಇಂದಿನ ಯುವಕರು ಹೆಚ್ಚಾಗಿ ಮದ್ಯಪಾನ ವ್ಯಸನಕ್ಕೆ ದಾಸರಾಗುತ್ತಿದ್ದು, ಇದರಿಂದ ದೂರ ಉಳಿಯಬೇಕು. ವ್ಯಸನಮುಕ್ತ ಗ್ರಾಮಕ್ಕೆ ನಾವೆಲ್ಲರೂ ಸೇರಿ ಕೈಜೋಡಿಸಬೇಕು ಎಂದರು.
ನಂತರ ಚಿಗುರು ಕಲಾ ತಂಡದ ವತಿಯಿಂದ ಜಾಗೃತಿ ಗೀತೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.