ಬಳ್ಳಾರಿ ; ಯುವಕ-ಯುವತಿಯರು ಮದ್ಯ ಮತ್ತು ಮಾದಕ ವಸ್ತುಗಳಿಗೆ ಬಲಿಯಾಗದೇ ಉತ್ತಮ ಆದರ್ಶ ಜೀವನ ರೂಪಿಸಿಕೊಳ್ಳಬೇಕು ಎಂದು ಎಸ್‌ಎಸ್‌ಎ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಹ್ಲಾದ ಚೌದ್ರಿ ಹೇಳಿದರು.
ಇಲ್ಲಿನ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಆಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ ಎ,ಬಿ,ಸಿ ಮತ್ತು ಡಿ ಘಟಕ ಸಹಯೋಗದೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಮದ್ಯ ಮತ್ತು ಮಾದಕ ದುಷ್ಪರಿಣಾಮ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ಜೀವನವು ಹೂವಿನಂತೆ ಸುಂದರವಾಗಿದ್ದು, ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳಿಗೆ ವಿದ್ಯಾರ್ಥಿಗಳು ಸಹ ದಾಸರಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಅಭಿಪ್ರಾಯ ಪಟ್ಟರು.
ವಿದ್ಯಾರ್ಥಿಗಳು ದುಶ್ಚಟಗಳಿಗೆ ವ್ಯಸನಿಗಳಾಗದೇ ವಿದ್ಯಾಭ್ಯಾಸದ ಕಡೆಗೆ ಗಮನಹರಿಸಬೇಕು. ತಮ್ಮ ಮನೆಯ ನೆರೆ-ಹೊರೆಯಲ್ಲಿ ಯಾರಾದರೂ ವ್ಯಸನಿಗಳು ಕಂಡುಬಂದಲ್ಲಿ ಆರೋಗ್ಯ ಇಲಾಖೆಯ ಸಂಬಂಧಿಸಿದ ವಿಭಾಗಕ್ಕೆ ಮಾಹಿತಿ ನೀಡಬೇಕು. ಇದರಿಂದ ಅವರನ್ನು ಮುಖ್ಯವಾಹಿನಿಗೆ ತರಲು ಸಹಕಾರಿಯಾಗುತ್ತದೆ ಎಂದರು.
ಡಿಎಚ್‌ಒ ಡಾ.ವೈ.ರಮೇಶಬಾಬು ಮಾತನಾಡಿ, 16 ರಿಂದ 22 ರ ವಯಸ್ಸಿನ ಯುವ ಸಮುದಾಯದಲ್ಲಿ ಹೆಚ್ಚಾಗಿ ಮಾದಕ ವಸ್ತುಗಳಿಗೆ ವ್ಯಸನಿಗಳಾಗುವುದು ಕಂಡುಬರುತ್ತಿದ್ದು, ಪ್ರಸ್ತುತದಲ್ಲಿ ಶೇ.55%ರಷ್ಟು ಈ ವಯಸ್ಸಿನ ಅಂತರದ ಯುವ ಸಮುದಾಯವು ಒಳಗೊಂಡಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಯುವಕರು ಮೊಬೈಲ್ ಗೀಳಿಗೆ ದಾಸರಾಗಬಾರದು. ಚಲನಚಿತ್ರಗಳನ್ನು ಮನರಂಜನೆ ದೃಷ್ಟಿಯಿಂದ ನೋಡಬೇಕು. ಒಳ್ಳೆಯ ಸಂದೇಶ ಮಾತ್ರ ಆಯ್ಕೆ ಮಾಡಬೇಕು. ಕೆಟ್ಟ ಅಭ್ಯಾಸಗಳನ್ನು ಅನುಕರಣೆ ಮಾಡಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಬಳಿಕ ಗಣ್ಯರು ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದ ಟೆಲಿ ಮನಸ್ ಎಂಬ 14416 ಉಚಿತ ಸಹಾಯವಾಣಿಯ ಜಾಗೃತಿ ಭಿತ್ತಿಚಿತ್ರ ಪ್ರದರ್ಶಿಸಿದರು.