ಬಳ್ಳಾರಿ : ಸರ್ಕಾರ ಕೈಗಾರಿಕಾ ಸಂಬಂಧಿಸಿದ ನಾನಾ ಕಾರ್ಯಕ್ರಮ ಮಾಡುವುದರ ಮೂಲಕ ಯುವಕರು ಉದ್ಯಮವನ್ನು ಸ್ಥಾಪಿಸಲು ಒಂದು ಉತ್ತಮ ಅವಕಾಶ ದೊರೆಯುತ್ತದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಹೇಳಿದರು.
ನಗರದ ಬಿಡಿಸಿಸಿ ಕಚೇರಿಯಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ (ವಿಟಿಪಿಸಿ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಇವರ ಸಹಯೋಗದೊಂದಿಗೆ ಎಂ.ಎಸ್.ಎ.ಇ ಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಮತ್ತು ವೇಗಗೊಳಿಸುವುದು” ಯೋಜನೆಯಡಿ ಲೀನ್ ಯೋಜನೆ ಮತ್ತು ಝಡ್ ಇಡಿ ಹಾಗೂ ರಫ್ತು ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಲೀನ್ ಯೋಜನೆ ಮತ್ತು ಝಡ್ ಇಡಿ ಹಾಗೂ ರಫ್ತು ಯೋಜನೆಗಳಿಂದ ನಾನಾ ಸೌಲಭ್ಯಗಳನ್ನು ಪಡೆದು ವ್ಯಾಪಾರ ಮತ್ತು ಸಂಘ ಸಂಸ್ಥೆ ಜತೆ ಸೇರಿ ಯುವಕರು ನವ ಉದ್ಯಮವನ್ನು ಆರಂಭಿಸಿ ಉದ್ಯಮಶೀಲತೆ ಬೆಳೆಸಿಕೊಳ್ಳಬೇಕು ಎಂದರು.
ರೈತರು, ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉದ್ಯಮಶೀಲತೆಯನ್ನು ಬೆಳೆಸಿಕೊಳ್ಳಬೇಕು. ಸರ್ಕಾರದಿಂದ ಸಣ್ಣ ಗುಡಿ ಕೈಗಾರಿಕೆ ಸ್ಥಾಪಿಸಲು ಸಬ್ಸಿಡಿ ವ್ಯವಸ್ಥೆ ಇದ್ದು, ಇದರ ಸೌಲಭ್ಯ ಪಡೆದು ನಿರುದ್ಯೋಗಿಗಳಿಗೆ ಕೆಲಸವನ್ನು ನೀಡಬೇಕು ಎಂದು ಹೇಳಿದರು.
ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ವಿ.ರಾಮಚಂದ್ರ ಮಾತನಾಡಿ, ನಮ್ಮ ದೇಶದಲ್ಲಿ ಸಣ್ಣ ಕೈಗಾರಿಕೆಗಳು ಅತಿ ಹೆಚ್ಚಾಗಿ ಕಂಡು ಬರುತ್ತವೆ. ಅತಿ ಹೆಚ್ಚು ಸಣ್ಣ ಕೈಗಾರಿಕೆಗಳು ರೈತರಿಂದ ಬೆಳವಣಿಯಾಗಿವೆ ಮತ್ತು ರೈತರಿಂದಲೇ ಉದ್ಯಮಗಳು ಬೆಳೆಯುತ್ತಿವೆ ಎಂದು ಹೇಳಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ್ ಬಿ ಮಾತನಾಡಿ, ಭಾರತ ದೇಶವು ಆರ್ಥಿಕವಾಗಿ 4ನೇ ಸ್ಥಾನದಲ್ಲಿದೆ. ಅಭಿವೃದ್ಧಿಯಲ್ಲಿ ಕೃಷಿ ಮತ್ತು ಕೈಗಾರಿಕೆಗಳು ಪ್ರಧಾನಪಾತ್ರ ವಹಿಸುತ್ತವೆ. ಸಣ್ಣ ಪ್ರಮಾಣದ ಕೈಗಾರಿಕೆಗಳಿಂದ ಗ್ರಾಮೀಣ ಜನರಿಗೆ ಉದ್ಯೋಗ ಸಿಗುತ್ತದೆ. ವಿದ್ಯಾರ್ಥಿಗಳು ಮತ್ತು ಉದ್ಯಮದಾರರು ಪ್ರೋಡಕ್ಟ್ ಉತ್ಪನ್ನ ಮಾಡಲು ಈ ಯೋಜನೆಯು ಉತ್ತಮವಾಗಿದೆ. ಜಪಾನ್ ದೇಶದ ರೀತಿ ಉತ್ತಮ ಪ್ರೋಡಕ್ಟ್ಗಳನ್ನು ಉತ್ಪತ್ತಿ ಮಾಡಬೇಕು ಎಂದರು.