ಬಳ್ಳಾರಿ, ಪತ್ರಿಕೆ ಓದಿನಿಂದ ಜ್ಞಾನ ವೃದ್ಧಿಸಿಕೊಳ್ಳಬಹುದು

Published on

ಬಳ್ಳಾರಿ : ಪತ್ರಿಕೋದ್ಯಮ ಎಂಬುದು ಜನರ ಜೀವನಾಡಿಯಂತಿದ್ದು, ಬದಲಾಗುತ್ತಿರುವ ಶಿಕ್ಷಣ ಕ್ರಮದಲ್ಲಿ ಕೌಶಲ್ಯ ಆಧಾರಿತ ತಾಂತ್ರಿಕ ಕಲಿಕೆಗೆ ಒತ್ತು ನೀಡಬೇಕು. ದಿನವೂ ಪತ್ರಿಕೆಗಳನ್ನು ಓದುವ ಹವ್ಯಾಸದಿಂದ ಜ್ಞಾನ ವೃದ್ಧಿಸಿಕೊಳ್ಳಬಹುದು ಎಂದು ವಿಎಸ್‌ಕೆ ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಹೇಳಿದರು.

ಇಲ್ಲಿನ ವಿಎಸ್‌ಕೆ ವಿವಿಯಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಪತ್ರಿಕೋದ್ಯಮ ರಂಗದಲ್ಲಿ ಅವಕಾಶಗಳು ಹೆಚ್ಚು, ವಿದ್ಯಾರ್ಥಿಗಳು ಕೌಶಲ್ಯ ಅಭಿವೃದ್ಧಿ ಹೊಂದುವುದರ ಮೂಲಕ ಪತ್ರಿಕೋದ್ಯಮ ವೃತ್ತಿಯಲ್ಲಿ ಮುಂದುವರೆಯಬಹುದು ಎಂದರು.

ಪತ್ರಿಕೋದ್ಯಮ ಶಿಕ್ಷಣ ಗಟ್ಟಿಗೊಳಿಸಲು ಮುಂಬರುವ ದಿನಗಳಲ್ಲಿ ವಿವಿಯಲ್ಲಿ ಸುಸಜ್ಜಿತ ಸ್ಟುಡಿಯೋ ಹಾಗೂ ಅತ್ಯಾಧುನಿಕ ಉಪಕರಣಗಳನ್ನು ಒದಗಿಸುತ್ತೇವೆ ಎಂದರು.

ಕುಲಸಚಿವ ಎಸ್.ಎನ್.ರುದ್ರೇಶ್ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚು ಬರೆಯಬೇಕು. ಬರೆಯುವುದರಿಂದ ಬರವಣಿಗೆಯಲ್ಲಿನ ಲೋಪದೋಷಗಳು ಮನವರಿಕೆಯಾಗುತ್ತವೆ. ಇದರಿಂದ ಬರವಣಿಗೆಯ ಕೌಶಲ್ಯ ವೃದ್ಧಿಸುತ್ತದೆ. ಇದರ ಜತೆಗೆ ಮಾತನಾಡುವ ಕೌಶಲ್ಯವನ್ನು ಸಹ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪತ್ರಕರ್ತ ಹರಿಶಂಕರ ಜಿ.ಪಾಳ್ಯ ಮಾತನಾಡಿ, ತನಿಖಾ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಳ್ಳುವವರು ನಿರ್ಭೀತಿ ಮತ್ತು ಆಮೀಷಕ್ಕೆ ತುತ್ತಾಗದಂತೆ ಕೆಲಸ ಮಾಡುವುದು ರೂಢಿಸಿಕೊಳ್ಳಬೇಕು. ಪತ್ರಿಕೋದ್ಯಮ ಎಂಬುದು ಹುಲಿಯ ಮೇಲಿನ ಸವಾರಿ ಇದ್ದಂತೆ. ಅಡ್ಡದಾರಿ ಹಿಡಿಯದೆ ನೈತಿಕ ಪತ್ರಿಕೋದ್ಯಮವನ್ನು ಅಂತರಾಳ ಮಾಡಿಕೊಂಡು ಕೆಲಸ ನಿರ್ವಹಿಸಿದಲ್ಲಿ ಯಾರ ಹಂಗಿಲ್ಲದೆ ಈ ಕ್ಷೇತ್ರದಲ್ಲಿ ಮುಂದುವರೆಯಬಹುದು ಎಂದು ತಿಳಿಸಿದರು. ಬಳಿಕ ಪತ್ರಿಕೋದ್ಯಮ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net