ಬಳ್ಳಾರಿ : ವಕ್ಪ್ ಬೋರ್ಡ್ ವಿಷಯವಾಗಿ ವಿಜಯಪುರದಲ್ಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ರಾಜಕೀಯವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು.
ಸಂಡೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಕ್ಪ್ ಬೋರ್ಡ್ ಸಂಬಂಧ ಕೇಂದ್ರದಿಂದ ಕೂಡ ಜಂಟಿ ಸಂಸದೀಯ ಸಮಿತಿ ಆಗಮಿಸಿದೆ. ಇದೊಂದು ರಾಜಕೀಯ ದುರುದ್ದೇಶದಿಂದ ಕೂಡಿದೆ. ಈ ಹಿಂದೆ ಯಾವಾಗಾದರೂ ಸಮಿತಿಯು ರಾಜಕ್ಕೆ ಆಗಮಿಸಿದೆಯೇ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ವಕ್ಫ್ ಬೋರ್ಡ್‌ನಿಂದ ರೈತರಿಗೆ ನೀಡಿರುವ ನೋಟಿಸ್‌ಗಳನ್ನು ವಾಪಾಸ್ ಪಡೆಯುವೆ ಹಾಗೂ ದಾಖಲಾತಿಗಳು ತಿದ್ದುಪಡಿಯಾದರೆ ರದ್ದು ಮಾಡುವೆ ಎಂದು ಸ್ಪಷ್ಟವಾಗಿ ಹೇಳಿರುವೆ ಎಂದರು.
ರಾಜ್ಯದ ಮೂರು ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳು ಗೆಲ್ಲುತ್ತಾರೆ. ಸಂಡೂರಿನ ನಾಲ್ಕು ಕಡೆ ಪ್ರಚಾರ ನಡೆಸಿರುವೆ ನಿರೀಕ್ಷೆಗೂ ಮೀರಿ ಜನರ ಸ್ಪಂದನೆ ಇದೆ. ನೂರಕ್ಕೆ ನೂರರಷ್ಟು ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಗೆಲ್ಲುವುದು ಖಚಿತ ಎಂದು ಹೇಳಿದರು.