ಯತ್ನಾಳ ಉಚ್ಚಾಟನೆ ಮರುಪರಿಶೀಲಿಸಲಿ

Published on

ಬಳ್ಳಾರಿ ; ಪಂಚಮಸಾಲಿ ಸಮುದಾಯದ ಪ್ರಭಾವಿ ನಾಯಕ, ಹಾಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ ಉಚ್ಚಾಟನೆಯನ್ನು ಬಿಜೆಪಿಯ ಹಿರಿಯ ನಾಯಕರು ಮರುಪರಿಶೀಲನೆ ಮಾಡಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಲಿಂಗಾಯತರಲ್ಲಿ ಪಂಚಮಸಾಲಿ ಸಮುದಾಯ ಶೇ.24%ರಷ್ಟು ಜನಸಂಖ್ಯೆ ಇದೆ. ರಾಜ್ಯ ರಾಜಕೀಯದ ಇತಿಹಾಸ ಗಮನಿಸಿದಾಗ ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ ಹಾದಿಯಾಗಿ, ವೀರೇಂದ್ರ ಪಾಟೀಲ್ ಸಿಎಂ ಇರುವಾಗಲೂ ಕಾಂಗ್ರೆಸ್ ಜತೆಗೆ ಪಂಚಮಸಾಲಿ ಸಮುದಾಯ ಗಟ್ಟಿಯಾಗಿ ನೆಲೆ ನಿಂತಿತ್ತು. ಆದರೆ, ವೀರೇಂದ್ರ ಪಾಟೀಲ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿದಾಗ ಆ ಸಮುದಾಯದ ಜನ ಜನತಾದಳಕ್ಕೆ ವಾಲಿದರು. ಈಗ ಕ್ರಮೇಣ ಈ ಜನಾಂಗ ಬಿಜೆಪಿಯತ್ತ ವಾಲಿದೆ. ಕಳೆದ ಎರಡು ದಶಕದಿಂದಲೂ ಬಿಜೆಪಿ ಪರವಾಗಿದ್ದಾರೆ. ಇಂತಹ ಹೊತ್ತಲ್ಲಿ ಅದೇ ಸಮುದಾಯದ ಪ್ರಭಾವಿ ನಾಯಕ ಯತ್ನಾಳ್ ಉಚ್ಚಾಟನೆ ಆ ಸಮುದಾಯಕ್ಕೂ, ಕಟ್ಟಾ ಹಿಂದೂಗಳಿಗೂ ನೋವು ತರಿಸಿದೆ. ಹೀಗಾಗಿ ದೆಹಲಿ ನಾಯಕರು ಈ ನಿರ್ಧಾರವನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದರು.

ಈಗಾಗಲೇ ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳು ಸೇರಿ ನಮ್ಮ ಸಮಾಜದ ಸ್ವಾಮೀಜಿಗಳು ನನ್ನ ಜತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಅವರ ನಿಲುವು ಕೂಡ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯಲ್ಲಿ ಉಳಿಸುವುದು ಆಗಿದೆ. ನಾನು ಕೂಡ ಯತ್ನಾಳ್ ಅವರನ್ನು ಸಂಪರ್ಕಿಸಲು ಪ್ರಯತ್ನ ಮಾಡುತ್ತಿರುವೆ. ಅವರು ಸಿಕ್ಕಿಲ್ಲ. ರಾಜ್ಯ, ರಾಷ್ಟ್ರೀಯ ನಾಯಕರ ಜತೆಗೂ ಈ ಬಗ್ಗೆ ಚರ್ಚೆ ನಡೆಸುವೆ. ಅಗತ್ಯ ಬಿದ್ದರೆ ನಾನು ದೆಹಲಿಗೆ ಹೋಗಿ ಹೈಕಮಾಂಡ್ ಮನವೊಲಿಸುವ ಪ್ರಯತ್ನ ಮಾಡುವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net