ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ

Published on

ಬಳ್ಳಾರಿ ; ಮಾನವ ಕಳ್ಳ ಸಾಗಾಣಿಕೆ ತಡೆಯಲು ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿದರೆ ಮಾತ್ರ ಸಾಧ್ಯ ಎಂದು ಹಿ ರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಅಂಗವಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಸಹಭಾಗೀದಾರರ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಕಾವಲು ಸಮಿತಿಯ ಸದಸ್ಯರಿಗೆ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಈಚೆಗೆ ಮಾನವ ಕಳ್ಳ ಸಾಗಾಣಿಕೆಯು ಬಹುದೊಡ್ಡ ಸಮಸ್ಯೆಯಾಗಿ ಬೆಳೆದಿದೆ. ಅದರಲ್ಲೂ ಹೆಚ್ಚಾಗಿ ಬಲಿಯಾಗುತ್ತಿರುವವರು ಮಹಿಳೆಯರು ಮತ್ತು ಮಕ್ಕಳು ಆಗಿರುವುದರಿಂದ ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದರು.

ಮಹಿಳೆಯರು ಆಮಿಷಗಳಿಗೆ ಬಲಿಯಾಗಿ ಮೋಸ ಹೋಗುವುದನ್ನು ತಡೆಯಬೇಕು. ಮಕ್ಕಳನ್ನು ತುಂಬಾ ಜಾಗೃತೆಯಿಂದ ಬೆಳೆಸಲು ಹೆಚ್ಚು ಅರಿವು ಮೂಡಿಸುವ ಕಾರ್ಯವಾಗಬೇಕು. ಮಕ್ಕಳಿಗೆ ಕಾನೂನಿನಾತ್ಮಕ ಸೌಲಭ್ಯಗಳನ್ನು ದೊರತರೆ ಮಗುವು ಬಲಿಷ್ಠವಾಗಿ ಬೆಳೆಯುತ್ತದೆ ಹಾಗೂ ದೇಶವು ಸುಭೀಷ್ಠ ರಾಷ್ಟವಾಗಿ ಬೆಳೆಯಲಿದೆ ಎಂದು ತಿಳಿಸಿದರು.

ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ ಶಿವಪೂರೆ ಮಾತನಾಡಿ, ಸಾರ್ವಜನಿಕರಲ್ಲಿ ಕಾನೂನು ಮತ್ತು ಶಿಕ್ಷೆ ಬಗ್ಗೆ ಜಾಗೃತಿ ಮೂಡಿಸಿ ಸಂಪೂರ್ಣವಾಗಿ ನಿರ್ಮೂಲನೆಯಾಗಿಸಲು ಅಧಿಕಾರಿಗಳು ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.

ಪ್ರತಿಯೊಬ್ಬರೂ ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಎಚ್ಚರವಹಿಸಬೇಕು. ನಿಮ್ಮ ಆಸಕ್ತಿಗಳನ್ನು ಬೇರೋಬ್ಬರೂ ಕದ್ದಾಲಿಸುವುದನ್ನು ಸಹ ನಾವು ಗಮನಿಸಬೇಕಿದೆ. ಇದರಿಂದ ಜಾಗರೂಕರಾಗಬೇಕಿದೆ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷೆ ತ್ರಿವೇಣಿ ಪತ್ತಾರ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಾಗಾರಕ್ಕೂ ಮುನ್ನ ರಾಜೇಶ್ ಎನ್.ಹೊಸಮನೆ ಅಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net