ಬಳ್ಳಾರಿ : ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಹಾಗೂ ಔದ್ಯೋಗಿಕವಾಗಿ ಅವಕಾಶಗಳನ್ನು ಸೃಷ್ಟಿಸಿಕೊಂಡು ಮಹಿಳೆಯರು ಅಭಿವೃದ್ಧಿ ಹೊಂದಬೇಕು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಹೇಳಿದರು.
ಇಲ್ಲಿನ ವಿಎಸ್‌ಕೆ ವಿವಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಮಹಿಳೆಯರನ್ನು ಪೂಜನೀಯ ಸ್ಥಾನದಲ್ಲಿರಿಸಿದ್ದರೂ, ಅವರನ್ನು ಹತ್ತಿಕ್ಕುವುದು ಅನಾದಿ ಕಾಲದಿಂದಲೂ ನಡೆಯುತ್ತಿದೆ. ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಪುರುಷ ಪ್ರಧಾನ ದೇಶದಲ್ಲಿ ಮಹಿಳೆಯರು ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.
ಶಿಕ್ಷಣ ವಂಚಿತ ಪೋಷಕರ ಮಕ್ಕಳ ಶಿಕ್ಷಣಕ್ಕಾಗಿ ಶೇ.10 ಮೀಸಲಾತಿ ಸರ್ಕಾರ ಕಲ್ಪಿಸಿದೆ. ಇದರ ಸದುಪಯೋಗವಾಗಬೇಕು. ಮಹಿಳೆಯರು ಪ್ರಶ್ನಿಸುವ ಮನೋಭಾವ ಬೆಳಸಿಕೊಂಡಲ್ಲಿ ವೈಚಾರಿಕವಾಗಿ ಮುಂದೆ ಬರುತ್ತಾರೆ ಎಂದರು.
ವಿವಿ ಕುಲಸಚಿವ ಎಸ್.ಎನ್.ರುದ್ರೇಶ್ ಮಾತನಾಡಿ, ಸಮಾಜದಲ್ಲಿ ಮಹಿಳೆಯರು ನಾಲ್ಕು ಗೋಡೆಗೆ ಸೀಮಿತವಾಗದೇ ಸಮಾಜಮುಖಿಯಾಗಿ ಬೆಳೆಯಬೇಕು. ಸಾವಿತ್ರಿಬಾಯಿ ಫುಲೆ, ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ, ಮದರ್ ಥೆರೇಸಾ, ಅಕ್ಕಮಹಾದೇವಿಯವರ ಚಿಂತನೆಗಳು ಇಂದಿನ ಮಹಿಳೆಯರಿಗೆ ಅದರ್ಶವಾಗಬೇಕು ಎಂದು ಅಭಿಪ್ರಾಯಪಟ್ಟರು.
ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಗಾಗಿ ಶಿಕ್ಷಣಕ್ಕೆ ಅದ್ಯತೆ ನೀಡಬೇಕು. ಮಹಿಳೆಯರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಸಮಾಜದಿಂದ ಆಗಬೇಕಾಗಿದೆ ಎಂದರು.
ಬಳಿಕ ಮಹಿಳಾ ದಿನಾಚರಣೆಯ ಪ್ರಯುಕ್ತ ಇತ್ತೀಚೆಗೆ ಆಯೋಜಿಸಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಪದಕ, ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.