ಬಳ್ಳಾರಿ : ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ಜಿ.ಜನಾರ್ದನರೆಡ್ಡಿಗೆ ತ್ವರಿತಗತಿಯಲ್ಲಿ ಜಾಮೀನು ಸಿಗಲಿ ಎಂಬ ಆಶಯದಿಂದ ಅವರ ಪತ್ನಿ ಅರುಣಾ ಲಕ್ಷ್ಮೀ ರಾಜ್ಯದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕಳೆದ ತಿಂಗಳು ಆಂಧ್ರಪದ್ರೇಶದ ವಿಶೇಷ ನ್ಯಾಯಾಲಯವು ಅಕ್ರಮಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನರೆಡ್ಡಿಗೆ ಏಳು ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿತು. ಅಲ್ಲದೆ, ಇತ್ತೀಚಿಗೆ ವಿವಿಧ ಪ್ರಕರಣಗಳ ವಿಚಾರಣೆಗಾಗಿ ಬೆಂಗಳೂರಿಗೆ ಸ್ಥಳಾಂತರಿಸಲಾಗಿತ್ತು. ಆದರೆ, ಸಿಬಿಐ ಕೋರ್ಟ್ ತೀರ್ಪು ಪ್ರಶ್ನಿಸಿ ರೆಡ್ಡಿ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದು ಕೋರ್ಟ್‌ಗೆ ರಜೆಯಿರುವ ಕಾರಣ ಪ್ರಕರಣವು ಮುಂದೂಡುತ್ತಲೆ ಬಂದಿದೆ. ಇದರ ನಡುವೆ ಜೂ 10ರಂದು ಪ್ರಕರಣ ವಿಚಾರಣೆಗೆ ಬರಲಿದ್ದು ಜಾಮೀನು ಸಿಗುವ ವಿಶ್ವಾಸದಲ್ಲಿ ರೆಡ್ಡಿ ಬೆಂಬಲಿಗರಿದ್ದಾರೆ.
ಪತ್ನಿ ದೇವಸ್ಥಾನಗಳ ಮೊರೆ : ಪತಿ ಜೈಲು ಸೇರಿದ ಬಳಿಕ ಬಿಡುಗಡೆಗಾಗಿ ಪತ್ನಿ ಅರುಣಾ ಲಕ್ಷ್ಮೀ ಜಿಲ್ಲೆಯಲ್ಲಿ ಇರದೆ ಕಳೆದ ಒಂದು ತಿಂಗಳಿಂದ ರಾಜ್ಯದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಆರೈಕೆ ಹೊತ್ತು ಹೋಮ, ಹವನ ನೇರವೇರಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೊಪ್ಪಳದ ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಬೆಟ್ಟ, ಪಟ್ಟಾಭಿರಾಮ ದೇವಸ್ಥಾನದಲ್ಲಿ ಸುಂದರಕಾಂಡ ರಾಮಾಯಣದ ಕೋಟಿ ಬರಹಕ್ಕೆ ಸಂಕಲ್ಪ ಮಾಡಿದ್ದಾರೆ. ಉಡುಪಿಯ ಶ್ರೀ ಕೃಷ್ಣನ ದರ್ಶನ, ಪುತ್ತಿಗೆ ಶ್ರೀಗಳ ಆರ್ಶೀವಾದ ಪಡೆದಿದ್ದಾರೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಶತ್ರು ನಿವಾರಣೆ ಹಾಗೂ ಸುಖ ಶಾಂತಿಗಾಗಿ ವಿಶೇಷ ಹೋಮ ಹವನ ನೆರವೇರಿಸಿದ್ದಾರೆ. ಬಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ನೆಮ್ಮದಿ ಜೀವನಕ್ಕೆ ಹಾರೈಕೆ ಹೊತ್ತಿದ್ದಾರೆ. ಆಸ್ಸಾಂ ರಾಜ್ಯದ ಗುವಾಹಟಿಯ ಪ್ರಮುಖ ದೇವಸ್ಥಾನ ಕಾಮಾಖೀನಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಜಾಮೀನು ದೊರೆಯಲಿ ಎಂಬುದಾಗಿ ಪೂಜೆ ಸಲ್ಲಿಸಿದ್ದಾರೆ. ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಜೈಲು ಸೇರಿದ ವೇಳೆಯೂ ಪತ್ನಿ ವಿಜಯಲಕ್ಷ್ಮೀ ಕೂಡ ರಾಜ್ಯದ ಹಾಗೂ ತಮಿಳುನಾಡಿನ ವಿವಿಧ ದೇವಸ್ಥಾನಗಳಲ್ಲಿ ಪತಿ ಬಿಡುಗಡೆಗಾಗಿ ಆರೈಕೆ ಹೊತ್ತಿದ್ದರು.
ಒಬ್ಬಂಟಿಯಾಗಿ ಹೋರಾಟ : ಕಳೆದ ಹತ್ತು ವರ್ಷಗಳ ಹಿಂದೆ ಮೊದಲ ಬಾರಿ ಅಕ್ರಮಗಣಿಗಾರಿಕೆ ಆರೋಪದಡಿ ಜನಾರ್ದನರೆಡ್ಡಿ ಜೈಲು ಸೇರಿದ ವೇಳೆ ಆಗ ರೆಡ್ಡಿ ಸಹೋದರರು, ಅಪ್ತ ಬಿ.ಶ್ರೀರಾಮುಲು ಹಾಗೂ ಅಪಾರ ಬೆಂಬಲಿಗರು ಬೆನ್ನಿಗೆ ನಿಂತಿದ್ದರು. ಅಲ್ಲದೆ, ಜೈಲಿಂದ ಬಿಡುಗಡೆಗೊಳಿಸಲು ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ ಸೇರಿ ಇತರರು ನ್ಯಾಯಾಧೀಶರ ಜತೆ ಒಪ್ಪಂದ ನಡೆಸಿ ಬೇಲ್ ಡೀಲ್ ಪ್ರಕರಣದಡಿ ಬಂಧಿತರಾಗಿದ್ದರು. ಆದರೆ, ಈಗ ಮೊದಲಿನಂತೆ ರೆಡ್ಡಿಯ ಸ್ವಂತ ಸಹೋದರರ ಬೆಂಬಲವಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಹೋದರರ ವಿರುದ್ದ ಪತ್ನಿ ಕಣಕ್ಕೆ ಇಳಿಸಿದ್ದು ಕೋಪ ಶಮನಗೊಂಡಿಲ್ಲ. ಅಪ್ತ ಬಿ.ಶ್ರೀರಾಮುಲು ನಡುವೆ ಆಸ್ತಿ ವಿವಾದ ಇಬ್ಬರ ಗೆಳೆತನ ಬಿರುಕು ಮೂಡಿದೆ. ಬಿಜೆಪಿ ಪಕ್ಷದಲ್ಲಿದ್ದರೂ ಪಕ್ಷಕ್ಕೆ ಮುಜುಗರವಾಗಲಿದೆ ಎಂಬ ಉದ್ದೇಶದಿಂದ ರೆಡ್ಡಿಯಿಂದ ಅಂತರ ಕಾದು ಕೊಂಡಿದ್ದಾರೆ. ಸದ್ಯ ರೆಡ್ಡಿ ಪತ್ನಿ ಅರುಣಾ ಲಕ್ಷ್ಮೀ ಕೇವಲ ದೇವಸ್ಥಾನಗಳ ಮೊರೆ ಹೋಗದೆ ಪ್ರಮುಖ ವಕೀಲರ ಜತೆ ಕಾನೂನಿನ ಸಲಹೆ ಪಡೆದು ಕಾನೂನತ್ಮಕವಾಗಿ ಹೋರಾಟ ನಡೆಸುತ್ತಿದ್ದಾರೆ. ಈಗಾಗಲೇ ಜೂ 10ರಂದು ನಡೆಯುವ ವಿಚಾರಣೆ ವೇಳೆಯ ಬಗ್ಗೆ ದೆಹಲಿಯ ವಕೀಲರ ಜತೆ ಒಂದು ಸುತ್ತ ಚರ್ಚಿಸಿದ್ದು ಒಬ್ಬಂಟಿಯಾಗಿ ಹೋರಾಟ ನಡೆಸಿರುವ ಮಹಿಳೆಯು ಯಾವೆಲ್ಲ ತಂತ್ರ ಹೂಡಿದ್ದಾರೆ ಎಂಬುದು ಮುಂದಿನ ನ್ಯಾಯಾಲಯದ ತೀರ್ಪಿನ ಆದೇಶದವರೆಗೆ ಕಾದು ನೋಡಬೇಕಿದೆ.