ಬಳ್ಳಾರಿ : ಮಾನವ ಕುಲವು ಅಹಿಂಸೆ, ದಯೆ, ಕರುಣೆಗಳನ್ನು ಪಾಲಿಸುವ ಮೂಲಕ ಧರ್ಮಾತೀತರಾಗಿ ಎಂದು ಸಾರಿದ ಮಹಾನ್ ಸಂತ ಸೇವಾಲಾಲ್‌ರು ಎಂದು ಶಿವಮೊಗ್ಗ ಜಿಲ್ಲೆಯ ಮಲವಗೊಪ್ಪದ ಸಹ ಪ್ರಾಧ್ಯಾಪಕ ಕೆ.ನಾಗೇಂದ್ರ ನಾಯ್ಕ ಹೇಳಿದರು.
ಇಲ್ಲಿನ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಾತನಾಡಿದರು. ಸೇವಾಲಾಲರು ತಮ್ಮ ತತ್ವಗಳ ಮೂಲಕ ಲೋಕಕ್ಕೆ ಜ್ಞಾನದ ಮೂಲಕ ಮುಕ್ತಿ ಮಾರ್ಗ ತೋರಿಸಿದವರು. ಬಂಜಾರರು ಈ ದೈವ ಪುರುಷನನ್ನು ಮೋತಿವಾಳೋ, ಲಾಲ್ ಮೋತಿ’ ಎಂದು ಕರೆಯುತ್ತಾರೆ. ಕಾರಣ ಮುಂಬಯಿಯ ಸ್ಮಿತ್ ಭಾವುಚಾ ಎಂಬ ಸ್ಥಳದಲ್ಲಿ ಹಿಂದೆ ಪೋರ್ಚುಗೀಸರ ಹಡಗು ಸಿಕ್ಕಿ ಹಾಕಿ ಕೊಂಡಿತ್ತು. ಇದನ್ನು ಸೇವಾಲಾಲ್ ತಮ್ಮ ಜಾಣತನದಿಂದ ದಡ ಸೇರಿಸಿ ವೀರರಾಗಿದ್ದರು ಎಂದು ವಿವರಿಸಿದರು.
ದೇವಿ ಮರಿಯಮ್ಮ ಅವರಿಂದ ದೊರೆತ ದಿವ್ಯಶಕ್ತಿಯನ್ನು ಬಂಜಾರರು ಸೇರಿ ಅಲೆಮಾರಿ ಜೀವನ ನಡೆಸುವ ಸಮುದಾಯಗಳನ್ನು ಉದ್ಧರಿಸಲು ಬಳಸಿದ ಸಂತ ಇವರು ಎಂಬ ಕಥೆಗಳು ಇಂದಿಗೂ ಚಾಲ್ತಿಯಲ್ಲಿವೆ. ಸೇವಾಲಾಲರು ಅನೇಕ ಪವಾಡಗಳನ್ನು ಮಾಡಿದ್ದಾರೆ. ಬಂಡಿಯನ್ನು ನಗಾರಿಯನ್ನಾಗಿ ಬಾರಿಸುವುದು, ಮಣ್ಣನ್ನು ಹುಗ್ಗಿ ಪಾಯಸವನ್ನಾಗಿಸುವುದು, ನೀರನ್ನು ತುಪ್ಪ ಮಾಡಿ ಯಜ್ಞ ಮಾಡುತ್ತಿದ್ದರು ಎನ್ನುವ ಪ್ರತೀತಿ ಇದೆ. ಮಹಾರಾಷ್ಟದ ಪೌರಾಗಢದಲ್ಲಿ (ಪೌರಾದೇವಿಯ ಸ್ಥಳ) ಸೇವಾಲಾಲರು ಐಕ್ಯರಾದರು ಎಂದು ಇತಿಹಾಸ ಹೇಳುತ್ತದೆ ಎಂದರು.
ಸಂಭ್ರಮದ ಮೆರವಣಿಗೆ:
ಸಂತ ಸೇವಾಲಾಲ್ ಜಯಂತಿಯ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆಯು ಸಂಭ್ರಮದಿಂದ ನಡೆಯಿತು. ಡೊಳ್ಳು ಕುಣಿತ, ತಾಷೆ ರಾಂಡೋಲ್ ಸೇರಿದಂತೆ ಲಂಬಾಣಿ ಕಸೂತಿಯ ವೇಷ ಧರಿಸಿದ ಮಹಿಳೆಯರು ಭಾಗವಹಿಸಿ ಮೆರವಣಿಗೆಗೆ ಮೆರಗು ತಂದರು.
ಮೆರವಣಿಗೆಯು ಮುನಿಸಿಪಲ್ ಮೈದಾನದಿಂದ ಆರಂಭವಾಗಿ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ವೇದಿಕೆ ಕಾರ್ಯಕ್ರಮದವರೆಗೆ ತಲುಪಿ ಸಂಪನ್ನಗೊಂಡಿತು.