ಜಿಲ್ಲಾ ಕೇಂದ್ರದಲ್ಲಿ ಸಂಸದರ ಕಚೇರಿ ಎಲ್ಲಿ ?

Published on

ಬಳ್ಳಾರಿ : ಲೋಕಸಭಾ ಸಂಸದ ಈ.ತುಕಾರಾಮ್ ಅವಳಿ ಜಿಲ್ಲೆಯ ಸಂಸದರಾಗಿ ಏಳು ತಿಂಗಳು ಕಳೆಯುತ್ತ ಬಂದರೂ ಈವರೆಗೂ ಜಿಲ್ಲಾ ಕೇಂದ್ರದಲ್ಲಿ ಸಂಸದರ ಕಚೇರಿಯನ್ನೇ ತೆರೆದಿಲ್ಲ.

ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡು ಏಳು ತಿಂಗಳು ಕಳೆಯುತ್ತಿದೆ. ಹೀಗಾಗಿ ಸಾರ್ವಜನಿಕರು ಜಿಲ್ಲೆಗೆ ಸಂಬಂಧಿಸಿದ ದೂರು ದುಮ್ಮಾನಗಳನ್ನು ಸಲ್ಲಿಸಲು ಸಂಸದರ ಕಚೇರಿ ಹುಡುಕಾಟ ನಡೆಸುವ ಪರಿಸ್ಥಿತಿಯಾಗಿದೆ. ಜಿಲ್ಲಾ ಕೇಂದ್ರದಲ್ಲಿ ಕಚೇರಿ ತೆರೆಯದೆ ಇರುವುದರಿಂದ ಕೆಲವರು ರಾಜಕೀಯ ಮುಖಂಡರ ಬೆಂಬಲದಿಂದ ಸಂಡೂರಿನಲ್ಲಿನ ಸಂಸದರ ನಿವಾಸಕ್ಕೆ ತೆರಳಿ ದೂರುಗಳನ್ನು ಸಲ್ಲಿಸುತ್ತಿದ್ದಾರೆ. ಈಗಾಗಲೇ ಜಿಲ್ಲೆಯ ಸಂಡೂರಿನಲ್ಲಿ ಈ.ತುಕಾರಾಮ್ ಸತತ ನಾಲ್ಕು ಬಾರಿ ಶಾಸಕ ಹಾಗೂ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಆಡಳಿತ ನಡೆಸಿದ್ದಾರೆ. ಹೀಗಾಗಿ ಜಿಲ್ಲೆಯ ವಿವಿಧ ಸಮಸ್ಯೆಗಳ ಬಗ್ಗೆ ಅರಿವು ಇದೆ. ಆದರೆ, ಜಿಲ್ಲಾ ಕೇಂದ್ರದಲ್ಲಿ ಸಂಸದರ ಕಚೇರಿ ತೆರೆಯಲು ವಿಳಂಬ ಏಕೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಯಾಗಿದೆ ?.

ಜನರ ಅನುಕೂಲಕ್ಕಾಗಿ ಜಿಲ್ಲಾಡಳಿತದಿಂದ ಆಯಾ ಜಿಲ್ಲೆಗಳಲ್ಲಿ ಸಂಸದರ ಕಚೇರಿ ವ್ಯವಸ್ಥೆ ಮಾಡುತ್ತದೆ. ಅದೇ ರೀತಿ ಜಿಲ್ಲೆಯಲ್ಲೂ ಹಳೆಯ ಡಿಸಿ ಕಚೇರಿ ಆವರಣದಲ್ಲಿ ಸಂಸದರಿಗೆಂದು ಕೊಠಡಿಯಿದ್ದು ಅದನ್ನು ಉದ್ಘಾಟಿಸದೆ ಇರುವುದರಿಂದ ನಾಮಫಲಕಕ್ಕೆ ಬಟ್ಟೆ ಸುತ್ತಲಾಗಿದೆ. ಈ. ತುಕಾರಾಮ್ ಅವರು ಸಂಸದರಾಗುವುಕ್ಕೂ ಮುನ್ನ ಮೊದಲು ಬಿಜೆಪಿಯ ವೈ.ದೇವೇಂದ್ರಪ್ಪ ಸಂಸದರಾಗಿ ಐದು ವರ್ಷ ಆಡಳಿತ ನಡೆಸಿದರು. ಆಗೊಮ್ಮೆ ಈಗೊಮ್ಮೆ ಕಚೇರಿಗೆ ಭೇಟಿ ನೀಡುತ್ತಿದ್ದರು. ದೇವೇಂದ್ರಪ್ಪಕ್ಕೂ ಮುನ್ನ ವಿ.ಎಸ್.ಉಗ್ರಪ್ಪ ಆರು ತಿಂಗಳು ಸಂಸದರಾಗಿದ್ದರು. ಆಡಳಿತ ನಡೆಸಿದ ಅಲ್ಪಾವಧಿಯಲ್ಲಿಯೇ ಉಗ್ರಪ್ಪ ನಿಯಮಿತವಾಗಿ ಕಚೇರಿಗೆ ಬರುತ್ತಿದ್ದರು. ಕೆಲ ಕಡೆ ಅನಿರೀಕ್ಷಿತವಾಗಿ ಭೇಟಿ ಅಧಿಕಾರಿಗಳಿಗೆ ಚಾಟಿ ಬೀಸುತ್ತಿದ್ದರು. ಆದರೆ, ತುಕಾರಾಮ್ ಅವರು ಗೆದ್ದು ಏಳು ತಿಂಗಳು ಕಳೆಯುತ್ತಿದೆ ಇನ್ನೂ ಇತ್ತ ಮುಖ ಮಾಡಿಲ್ಲ ಎಂಬುದು ಸಾರ್ವಜನಿಕರಿಗೆ ಬೇಸರ ಮೂಡಿಸಿದೆ. ಈಚೆಗೆ ನಡೆದ ಉಪಚುನಾವಣೆಯ ಪ್ರಚಾರದ ವೇಳೆ ಜಿಲ್ಲೆಯ ಸಂಡೂರಿನಲ್ಲಿ ಭರ್ಜರಿ ಪ್ರಚಾರ ನಡೆಸಿ ಮತಗಳನ್ನು ಗಿಟ್ಟಿಸಿಕೊಂಡು ಪತ್ನಿ ಅನ್ನಪೂರ್ಣ ಅವರನ್ನು ಗೆಲ್ಲಿಸಿಕೊಂಡರು.

ಕೆಲವೇ ಬಾರಿ ಭೇಟಿ : ಬಾಣಂತಿಯರ ಸರಣಿ ಸಾವಿನ ಹಿನ್ನಲೆ ಜಿಲ್ಲೆಯ ಬಿಮ್ಸ್ ಹಾಗೂ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು. ಇದಕ್ಕೂ ಮುನ್ನ ನಗರದ ಜಿಪಂ ಹಮ್ಮಿಕೊಂಡಿದ್ದ ದಿಶಾ ಸಭೆಯಲ್ಲಿ ಪಾಲ್ಗೂಂಡು ಜಿಲ್ಲೆಯ ಅಧಿಕಾರಿಗಳ ಕಾರ್ಯ ವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ನಂತರ ಜಿಲ್ಲೆಯಲ್ಲಿ ವಿವಿಧ ಕೇಂದ್ರ ಸರ್ಕಾರದ ಕಾಮಗಾರಿಗಳು ಅಮೆಗಾತಿಯಲ್ಲಿ ಸಾಗುತ್ತಿದ್ದು, ಅವುಗಳಿ ಭೇಟಿ ನೀಡಿ ಕಾಮಗಾರಿಗಳ ಬಗ್ಗೆ ಪರಿಶೀಲನೆಯಾಗಲಿ ಅಥವಾ ಗುಣಮಟ್ಟದ ಬಗ್ಗೆ ಪರಿಶೀಲಿಸಿಲ್ಲ ಎಂಬುದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ. ವಿಜಯನಗರ ಹಾಗೂ ಜಿಲ್ಲೆಯ ಸಂಸದರಾಗಿರುವ ತುಕಾರಾಮ್ ವಿಜಯನಗರದಲ್ಲಿಯೂ ಕಚೇರಿ ತೆರೆದಿಲ್ಲ. ಆ ಜಿಲ್ಲೆಯ ಜನರು ಸಂಸದರನ್ನು ಕಾಣಲು ಸಂಡೂರಿಗೆ ತೆರಳುತ್ತಿದ್ದಾರೆ.

ನಗರಾಭಿವೃದ್ಧಿ ಕೋಶ ಇಲಾಖೆಯಲ್ಲಿ ಉದ್ಘಾಟನೆ : ಹಿಂದಿನ ಸಂಸದರ ಕಚೇರಿಯನ್ನು ತುಕಾರಾಮ್ ಬಳಕೆಗೆ ನಿರಾಕರಿಸಿದ್ದರು. ಬಳಿಕ ಉಪವಿಭಾಗಾಧಿಕಾರಿ ಕಚೇರಿ ಬಳಿ ಹೊಸದೊಂದು ಕಚೇರಿಯನ್ನು ತೋರಿಸಿದ್ದು ಅದಕ್ಕೂ ಒಪ್ಪಿಲ್ಲ ಎನ್ನಲಾಗಿದೆ. ಸದ್ಯ ಆವರಣದಲ್ಲಿನ ಜಿಲ್ಲಾ ನಗರಾಭಿವೃದ್ಧಿ ಕೋಶ ಕಾರ್ಯಾಲಯದಲ್ಲಿ ಸಂಸದರ ಕಚೇರಿ ಆರಂಭಿಸಲು ಸಿದ್ದತೆ ನಡೆಸಲಾಗಿದೆ. ಆದರೆ, ನಗರಾಭಿವೃದ್ಧಿ ಕೋಶ ಕಚೇರಿಯನ್ನು ಸಮೀಪದ ಖಜಾಂಚಿ ಇಲಾಖೆಗೆ ವರ್ಗಾಯಿಸಿದ ಬಳಿಕ ಸಂಸದರ ಕಚೇರಿಯ ಕೆಲಸ ಕಾರ್ಯಗಳು ನಡೆಯಲಿವೆ. ಆದರೆ, ಈವರೆಗೂ ಖಜಾಂಚಿ ಇಲಾಖೆಯಲ್ಲಿ ನಗರಾಭಿವೃದ್ಧಿ ಕಚೇರಿಯ ಯಾವ ದುರಸ್ತಿ ಕಾರ್ಯಗಳು ನಡೆಯುತ್ತಿಲ್ಲ. ಆದ್ದರಿಂದ, ಇನ್ನೂ ಸಂಸದರ ಕಚೇರಿ ಉದ್ಘಾಟನೆಗೆ ವಿಳಂಬವಾಗಲಿದೆ ಎಂಬುದಾಗಿ ಅಧಿಕಾರಿಯೊಬ್ಬರು ತಿಳಿಸಿದರು.

ಕೋಟ್.... ಜಿಲ್ಲೆಯ ಸಂಸದರ ನೂತನ ಕಚೇರಿ ಡಿಸಿ ಕಚೇರಿ ಆವರಣದಲ್ಲಿನ ನಗರಾಭಿವೃದ್ಧಿ ಕೋಶ ಇಲಾಖೆಯಲ್ಲಿ ಆರಂಭಿಸಲಾಗುವುದು. ಕಚೇರಿ ಉದ್ಘಾಟನೆಗೆ ಜ.17ರಂದು ನಿಗದಿ ಮಾಡಲಾಗಿದೆ.

- ಪ್ರಶಾಂತ ಕುಮಾರ ಮಿಶ್ರಾ, ಡಿಸಿ, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net