ಬಳ್ಳಾರಿ : ರಾಜ್ಯದ ನಾನಾ ಜಿಲ್ಲೆಗಳಲ್ಲಿ ಕಾಂಗ್ರೆಸ್ ಸರ್ಕಾರ ಯಾವ ಪುರುಷಾರ್ಥಕ್ಕೆ ಸಾಧನ ಸಮಾವೇಶ ಆಯೋಜಿಸುತ್ತಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಪ್ರಶ್ನಿಸಿದರು.
ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಯಡವಟ್ಟಿನಿಂದ ರಸಗೊಬ್ಬರ ದೊರೆಯದೆ ರೈತರು ಸಂಕಷ್ಟದಲ್ಲಿದ್ದಾರೆ. ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ 981 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈವರೆಗೆ ಮೃತ ರೈತ ಕುಟುಂಬಗಳಿಗೆ ಪರಿಹಾರ ನೀಡಿಲ್ಲ ಹಾಗೂ ಕೃಷಿ ಸಚಿವರು ಭೇಟಿ ನೀಡಿ ಸಾಂತ್ವನ ಹೇಳಿಲ್ಲ ಎಂದು ಆರೋಪಿಸಿದರು.
ಕೃಷಿ ಸಚಿವ ಚಲುವರಾಯ ಸ್ವಾಮಿ ಕ್ಷೇತ್ರದ ಮಂಡ್ಯದ ಮದ್ದೂರಿನಲ್ಲಿ ಸಾಧನ ಸಮಾವೇಶ ಆಯೋಜಿಸಿ ಜನರಿಗೆ ಏನು ಸಂದೇಶ ನೀಡಲು ಹೊರಟಿದ್ದಾರೆ. ಕೇವಲ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಜೆ.ಪಿ.ನಡ್ಡಾ, ಎಚ್.ಡಿ.ಕುಮಾರ ಸ್ವಾಮಿ ಅವರನ್ನು ಟೀಕಿಸುವುದೆ ಇವರ ಕೆಲಸವಾಗಿದೆ ಎಂದು ಕಿಡಿಕಾರಿದರು.
ಸಿಎಂ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ಕೃಷಿ ಸಚಿವರ ರಾಜೀನಾಮೆ ಪಡೆದು, ಮೃತರಿಗೆ ಜೀವ ನೀಡುವಂತ ಕೆಲಸ ಮಾಡಬೇಕು. ಎಲ್ಲ ಮಂತ್ರಿಗಳು ಜಿಲ್ಲಾ ಕೇಂದ್ರಗಳಿಗೆ ತೆರಳಿ ರೈತರ ಸಮಸ್ಯೆ ಆಲಿಸಿ ಹಾಗೂ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಕೇಂದ್ರದಿಂದ ರಾಜ್ಯಕ್ಕೆ ಪೂರೈಸಬೇಕಿದ್ದ ರಸಗೊಬ್ಬರವನ್ನು ವಿತರಿಸಿದೆ. ಆದರೆ, ರಾಜ್ಯ ಸರ್ಕಾರ ರೈತರಿಗೆ ಸಮರ್ಪಕವಾಗಿ ವಿತರಿಸದೆ ಕಾಳಸಂತೆಯಲ್ಲಿ ಮಾರಾಟ ಮಾಡಿ ಕೇಂದ್ರದ ವಿರುದ್ಧ ಬೊಟ್ಟು ಮಾಡುತ್ತಿದೆ ಎಂದು ಗುಡುಗಿದರು. ರಾಜ್ಯದ ರಸಗೊಬ್ಬರ ಅಕ್ರಮವಾಗಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶಕ್ಕೆ ರಫ್ತುಯಾಗುತ್ತಿದೆ ಎಂದು ಆರೋಪಿಸಿದರು.
ಸಿಎಂ ಪುತ್ರ ಯತೀಂದ್ರ ಅವರು ತಮ್ಮ ತಂದೆಯನ್ನು ಜಯಚಾಮರಾಜ್ ಒಡೆಯರ್ ಜತೆ ಓಲೈಸಿಕೊಂಡಿದ್ದಾರೆ. ಮೊದಲು ನಿಮ್ಮ ತಂದೆ ರಾಜ್ಯದ ರೈತರಿಗೆ ಸೌಲಭ್ಯ ಒದಗಿಸಲಿ ಎಂಬುದಾಗಿ ತಿರುಗೇಟು ನೀಡಿದರು.
ಸರ್ಕಾರ ಜಿಲ್ಲೆಯ ಕೃಷಿ ಇಲಾಖೆ 31 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ವಿತರಿಸಿದೆ. ಆದರೆ, ಮಳಿಗೆಗಳಲ್ಲಿ ಮಾತ್ರ ನೋ ಸ್ಟಾಕ್ ಬೋರ್ಡ್ ಹಾಕಿದ್ದು, ರಸಗೊಬ್ಬರ ಎಲ್ಲಿ ಪೂರೈಕೆಯಾಗಿದೆ ಎಂದರು. ಬಿಜೆಪಿ ಸರ್ಕಾರದಲ್ಲಿ ರಸಗೊಬ್ಬರಕ್ಕಾಗಿಯೇ ಸಾವಿರ ಕೋಟಿ ರೂ. ಮೀಸಲು ಇಡಲಾಗಿತ್ತು. ಕಾಂಗ್ರೆಸ್ ಸರ್ಕಾರ ಇದರಲ್ಲಿ ಆರನೂರು ಕೋಟಿ ರೂ. ಕಡಿತಗೊಳಿಸಿದೆ ಎಂದು ಗುಡುಗಿದರು.
ಆರ್‌ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತದಲ್ಲಿ ಇಪ್ಪತ್ತು ಅಧಿಕ ಜನ ಮೃತಪಟ್ಟಿದ್ದಾರೆ ಎಂಬ ಮಾಹಿತಿ ನನಗಿದೆ. ಆದ್ದರಿಂದ, ಮೃತಪಟ್ಟ ಎಲ್ಲರಿಗೂ ಪರಿಹಾರ ಒದಗಿಸಲಿ ಎಂದು ಒತ್ತಾಯಿಸಿದರು.
ರೈತ ಮುಖಂಡರಾದ ಐನಾಥರೆಡ್ಡಿ, ಗುರಲಿಂಗನಗೌಡ, ಡಾ.ಜಿ.ಪುರುಷೋತ್ತಮಗೌಡ ಇದ್ದರು.