ನೀರು ಸಂರಕ್ಷಣೆ ನಮ್ಮೆಲ್ಲರ ಹೊಣೆ

Published on

ಬಳ್ಳಾರಿ ; ನಿಸರ್ಗ ಕೊಡುಗೆಯಾದ ನೀರು ಅತ್ಯಮೂಲ್ಯವಾದದ್ದು. ಎಲ್ಲರೂ ಮಿತವಾಗಿ ಬಳಸುವ ಮೂಲಕ ಸಂರಕ್ಷಿಸೋಣ ಎಂದು ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೇರ್ ಹೇಳಿದರು.

ಇಲ್ಲಿನ ವೀರಶೈವ ಕಾಲೇಜಿನಲ್ಲಿ ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಸಹಯೋಗದೊಂದಿಗೆ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಜಲ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂವಿಧಾನವು ನಮಗೆ ಮೂಲಭೂತ ಹಕ್ಕುಗಳನ್ನು ನೀಡುವುದರ ಜತೆಗೆ ಮೂಲಭೂತ ಕರ್ತವ್ಯಗಳನ್ನು ಸಹ ನೀಡಿದೆ. ಅದರಲ್ಲಿ ಪರಿಸರ ರಕ್ಷಣೆ ಜತೆಯಲ್ಲಿ ನೀರು ಸಂರಕ್ಷಣೆಯೂ ಒಳಗೊಂಡಿದೆ. ಸುಸ್ಥಿರ ಅಭಿವೃದ್ಧಿಯ ಮೂಲಕ ನೀರನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೂ ನೀಡೋಣ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗಿ ಕಂಡುಬರುತ್ತಿದೆ. ಕುಡಿಯುವ ನೀರು ಪೋಲಾಗದಂತೆ ನೋಡಿಕೊಳ್ಳಬೇಕು. ಏ.10 ರವರೆಗೆ ತುಂಗಭದ್ರ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಯಲಿದ್ದು, ಕೃಷಿ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕಾಗುತ್ತದೆ. ಹಾಗಾಗಿ ನೀರನ್ನು ಮಿತವಾಗಿ ಬಳಸಲು ಸೂಚಿಸಬೇಕು ಎಂದು ಸಲಹೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಮಾತನಾಡಿ, ಸಕಲ ಜೀವರಾಶಿಗಳಿಗೆ ನೀರು ಬಹುಮುಖ್ಯವಾಗಿದೆ. ಭೂ ಮಂಡಲದಲ್ಲಿ ಇರುವ ನೀರಿನ ಪ್ರಮಾಣದಲ್ಲಿ ಶೇ.97% ರಷ್ಟು ಉಪ್ಪು ನೀರು ಇದ್ದು, ಶೇ.3% ರಷ್ಟು ಮಾತ್ರ ಸಿಹಿ ನೀರು ಬಳಕೆಗೆ ಉಪಯುಕ್ತವಾಗಿದೆ. ಇದರಲ್ಲಿ ಕೇವಲ ಶೇ. 0.07%ರಷ್ಟು ನೀರು ಕುಡಿಯಲು ಬಳಕೆಯಾಗುತ್ತಿದೆ. ಉಳಿದ ನೀರು ಘನ ರೂಪದಿ ಹಿಮಪಾತಗಳಲ್ಲಿದೆ ಎಂದು ಹೇಳಿದರು.

ಬೇಸಿಗೆ ಬಂತೆಂದರೇ ಕುಡಿಯುವ ನೀರಿನ ಬರ ಎದುರಾಗಿ ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ ನೀರನ್ನು ಅತಿಯಾಗಿ ಪೋಲು ಮಾಡದೆ ಅಗತ್ಯವಿರುವಷ್ಟು ಮಾತ್ರ ಬಳಸಬೇಕು ಎಂದು ತಿಳಿಸಿದರು.

ಭೂಮಿಯ ಮೇಲೆ ಎಲ್ಲ ಜೀವಿಗಳಿಗೂ ಬದುಕುವ ಹಕ್ಕಿದೆ ಅದರಂತೆ ನೀರು ಅತ್ಯವಶ್ಯಕವಾಗಿದೆ. ಸಮುದ್ರಗಳು ಕಡಲತೀರ ಕೊರೆದು ಭೂಮಿಯನ್ನು ಅತಿಕ್ರಮಿಸುತ್ತಿವೆ. ಪ್ರಸ್ತುತದಲ್ಲಿ ಸಣ್ಣ-ಸಣ್ಣ ನದಿ, ಹಳ್ಳಗಳು ಕಣ್ಮರೆಯಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಪ್ರಸ್ತುತದಲ್ಲಿ ಕಾರ್ಖಾನೆಗಳಿಂದ ವಾಯು ಮಾಲಿನ್ಯ ಉಂಟಾಗಿ ಓಜೋನ್ ಪದರಿಗೆ ರಂಧ್ರಗಳು ಬಿದ್ದು ಸೂರ್ಯನ ಶಾಖದಿಂದ ಹಲವಾರು ಪರಿಣಾಮ ಬೀರುತ್ತಿದೆ. ಗಿಡ ಮರಗಳನ್ನು ಬೆಳೆಸಬೇಕು. ಪ್ರಕೃತಿ ಸಂರಕ್ಷಣೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಸರ್ಕಾರಗಳು ಕೆರೆ-ನದಿಗಳನ್ನು ಸಂರಕ್ಷಿಸಲು ಹಲವಾರು ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಿವೆ. ತಮ್ಮ ಮನೆಯ ಅಕ್ಕ-ಪಕ್ಕದಲ್ಲಿ ನೀರು ಪೋಲಾಗುವುದು ಕಂಡುಬಂದಲ್ಲಿ ಅದನ್ನು ನಿಲ್ಲಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶ್ವ ಜಲ ದಿನ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ ಮತ್ತು ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net