ಬಳ್ಳಾರಿ : ಜಿಲ್ಲೆಯಲ್ಲಿ ಕೈಗಾರಿಕೆಗಾಗಿ ಸ್ವಾಧೀನಪಡಿಸಿಕೊಂಡ ಜಮೀನುಗಳಲ್ಲಿ ಕೆಐಎಡಿಬಿ ಹಾಗೂ ಜಿಲ್ಲಾಡಳಿತ ಕರೆದಿರುವ ಸಭೆ ರದ್ದು ಸೇರಿದಂತೆ ನಾನಾ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ನಾನಾ ಸಂಘಟನೆಗಳ ನೇತೃತ್ವದಲ್ಲಿ ಇಲ್ಲಿನ ಡಿಸಿ ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಜಿಲ್ಲೆಯ ಕುಡಿತಿನಿ, ವೇಣಿ ವೀರಾಪುರ, ಹರಗಿನಡೋಣಿ, ಕೊಳಗಲ್, ಯರ‌್ರಂಗಳಿ, ಜಾನೆಕುಂಟೆ, ಸಿದ್ದಮ್ಮನಹಳ್ಳಿ ಸೇರಿದಂತೆ ವಿವಿಧಡೆ ಕೃಷಿ ಭೂಮಿಯನ್ನು ಕೈಗಾರಿಕೆ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಂಡು ಹಲವು ವರ್ಷಗಳ ಕಳೆಯುತ್ತಿದೆ. ಅಲ್ಲದೆ, ಅರ್ಸೆಲ್ಲರ್ ಮಿತ್ತಲ್ ಕಂಪನಿಯೂ ಒಪ್ಪಂದಂತೆ ಮೂರು ವರ್ಷಗಳಲ್ಲಿ ಮಾತ್ರವಲ್ಲಾ 15 ವರ್ಷಗಳ ಗತಿಸಿದರೂ ಕೈಗಾರಿಕೆಯನ್ನು ಸ್ಥಾಪಿಸಿಲ್ಲ. ಅದೇ ರೀತಿಯಾಗಿ ನಮ್ಮ ಕುಟುಂಬಗಳಿಗೆ ಉದ್ಯೋಗ ಕೂಡ ನೀಡಿಲ್ಲ. ಆದ್ದರಿಂದ, ಅರ್ಸೆಲ್ಲರ್ ಕಂಪನಿಯ ಉದ್ದೇಶ ಮುಗಿದು ಇರುವುದರಿಂದ ಅಸಿಂಧುವಾದ ಭೂಬೆಲೆ ಬದಲಿಗೆ ಹೊಸ ಭೂ ಬೆಲೆ ನೀಡಬೇಕು. ಉದ್ಯೋಗ ಪರಿಹಾರವಾಗಿ 2015 ರಿಂದ ಮಾಸಿಕ 20 ಸಾವಿರ ರೂ. ಗಳಂತೆ ಒದಗಿಸಬೇಕು. ಈ ತಿಂಗಳ ಸೆ.17 ರಂದು ಕರೆದಿರುವ ಪರಿಸರ ಆಲನಾ ಸಭೆ ರದ್ದುಗೊಳಿಸಿ, ಸಿಎಂ ಹಾಗೂ ಬೃಹತ್ ಕೈಗಾರಿಕೆ ಸಚಿವರ ಜತೆ ಮಾತುಕತೆ ನಡೆಸಲು ಅವಕಾಶ ನೀಡಬೇಕು ಎಂದು ನಾನಾ ಸಂಘಟನಕಾರರರು ಒತ್ತಾಯಿಸಿದರು. ಬಳಿಕ ಡಿಸಿ ನಾಗೇಂದ್ರ ಪ್ರಸಾದ್ ಕೆ. ಮೂಲಕ ಕೈಗಾರಿಕೆ ಸಚಿವರಿಗೆ ಮನವಿ ಸಲ್ಲಿಸಿದರು.