ಬಳ್ಳಾರಿ : ಈಗಿನ ಪೀಳಿಗೆಯು ಪ್ರಸ್ತುತ ದಿನಮಾನಗಳಲ್ಲಿ ನಡೆಯುವ ಆಗು-ಹೋಗುಗಳನ್ನು ಗಮನಿಸಿ ನಡೆಯಬೇಕಿದೆ ಎಂದು ಡಿಸಿ ನಾಗೇಂದ್ರ ಪ್ರಸಾದ್. ಕೆ. ಅಭಿಪ್ರಾಯಪಟ್ಟರು.
ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ನನ್ನ ಮತ-ನಮ್ಮ ಹಕ್ಕು ಎಂಬ ಧ್ಯೇಯವಾಕ್ಯದೊಂದಿಗೆ ಸೋಮವಾರ ಆಯೋಜಿಸಿದ್ದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಷ್ಟದ ವ್ಯವಸ್ಥೆ, ಕಾನೂನಗಳ ಪರಿಪೂರ್ಣತೆ, ಕಾನೂನು ಅನುಷ್ಟಾನವಾಗದಿದ್ದರೆ ಆಗುವ ಘಟನೆಗಳನ್ನು ಗಮನಿಸಬೇಕು. ಹೀಗಾಗಿ ವಿದ್ಯಾರ್ಥಿಗಳು ಆಳವಾದ ಅಧ್ಯಯನ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಭಾರತ ಸಂವಿಧಾನವನ್ನು ನಾವೆಲ್ಲರೂ ಎಷ್ಟು ಗೌರವಿಸುತ್ತೇವೆಯೋ, ಅಷ್ಟೇ ಮುಂಬರುವ ದಿನಗಳಲ್ಲಿ ಅಭಿವೃದ್ಧಿ ಹೊಂದಿದ ಭಾರತ ಕಾಣುತ್ತೇವೆ. ಆದರೆ ತಿರಸ್ಕಾರ ಮನೋಭಾವ ಕಂಡಾಗ ರಾಷ್ಟದ ಅವನತಿಯ ಹಾದಿಯೂ ಸಹ ಅಷ್ಟೇ ಸಮೀಪಿಸುತ್ತದೆ. ಯಾವುದೇ ಒಂದು ದೇಶದ ಅಭಿವೃದ್ಧಿಯು ಅಲ್ಲಿನ ಆಡಳಿತ ವ್ಯವಸ್ಥೆ ಮೇಲೆ ಅವಲಂಬಿತವಾಗಿರುತ್ತದೆ. ಅಂತಹ ಉತ್ತಮ ಆಡಳಿತ ವ್ಯವಸ್ಥೆಯನ್ನು ಭಾರತದಲ್ಲಿ ಕಾಣಬಹುದಾಗಿದೆ ಎಂದರು.
ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್ ಮಾತನಾಡಿ, ಇಂದಿನ ಯುವ-ಪೀಳಿಗೆಯೇ ಪ್ರಜಾಪ್ರಭುತ್ವ ಭವಿಷ್ಯವಾಗಿದೆ. ಈಗಿನ ಯುವ ಮನಸ್ಕರು ಸಂವಿಧಾನ ಹಕ್ಕುಗಳು ಮತ್ತು ಮೂಲಭೂತ ಕರ್ತವ್ಯಗಳ ಅರಿವು ಹೊಂದಬೇಕಿದೆ. ಉದಾತ್ತ ಗುರಿ ಹೊಂದುವುದರ ಮೂಲಕ ದೇಶಕ್ಕೆ ಅಭಿವೃದ್ಧಿಯ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮ ಮುನ್ನ ಡಿಸಿ ನಾಗೇಂದ್ರ ಪ್ರಸಾದ್.ಕೆ ಅವರು ಸಂವಿಧಾನ ಪ್ರಸ್ತಾವನೆಯನ್ನು ಬೋಧಿಸಿದರು. ಇಂದಿನಿಂದ ಅಕ್ಟೋಬರ್ ಅಂತ್ಯದವರೆಗೆ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಲ್ಲಿ ಭಾಷಣ, ಚರ್ಚಾಸ್ಪರ್ಧೆ, ಚಿತ್ರಕಲೆ ಮತ್ತು ಫೋಟೋಗ್ರಾಫಿ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು. ನ.26 ರಂದು ವಿಜೇತರಾದವನ್ನು ಸನ್ಮಾನಿಸಲಾಗುವುದು.
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನಗರದ ನೂತನ ಜಿಲ್ಲಾಡಳಿತ ಭವನದಿಂದ ಆಕರ್ಷಕ ಸೈಕಲ್ ರ‌್ಯಾಲಿಗೆ ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್ ಸೈಕಲ್ ಸವಾರಿ ಮಾಡುವ ಮೂಲಕ ಚಾಲನೆ ನೀಡಿದರು. ರ‌್ಯಾಲಿಯು ನೂತನ ಜಿಲ್ಲಾಡಳಿತ ಭವನದಿಂದ ಆರಂಭಗೊಂಡು ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ವೇದಿಕೆ ಕಾರ್ಯಕ್ರಮದವರೆಗೆ ಸಾಗಿಬಂದಿತು. ನನ್ನ ಮತ-ನಮ್ಮ ಹಕ್ಕು ಎಂಬ ಘೋಷಣೆ ಕೂಗಲಾಯಿತು. ಚಿಗುರು ಕಲಾತಂಡದ ಹುಲುಗಪ್ಪ ಸಂಗಡಿಗರಿಂದ ಮತದಾನ ಜಾಗೃತಿ ಗೀತೆಗಳನ್ನು ಪ್ರಸ್ತುತಪಡಿಸಿದರು.