ಬಳ್ಳಾರಿ : ಆರೋಗ್ಯಕರ ಮತ್ತು ಸುಸ್ಥಿರ ಸಮುದಾಯಗಳನ್ನು ನಿರ್ಮಿಸಲು ತ್ಯಾಜ್ಯ ನಿರ್ವಹಣೆಯು ಅತ್ಯಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿವೃತ್ತ ಮುಖ್ಯಪರಿಸರ ಅಧಿಕಾರಿ ಬಿ.ಎನ್.ರಮೇಶ ಹೇಳಿದರು.
ಇಲ್ಲಿನ ಜಿಪಂ ಸಭಾಂಗಣದಲ್ಲಿ ನಗರಾಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲೆಯ ಎಲ್ಲ ನಗರ, ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಸ್ವಚ್ಛ ಭಾರತ್ ಮಿಷನ್ 2.0 ರ ಸಾಮರ್ಥ್ಯಅಭಿವೃದ್ದಿ ಘಟಕದಡಿ ಸಮಗ್ರ ಘನ ತ್ಯಾಜ್ಯ ವಸ್ತು ನಿರ್ವಹಣೆಯ ಕುರಿತು ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಕಸದ ಉತ್ಪಾದನೆಯನ್ನು ಕಡಿಮೆ ಮಾಡಲು, ಮರುಬಳಕೆ ಮತ್ತು ಅದನ್ನು ಗರಿಷ್ಠಗೊಳಿಸಲು ಹಾಗೂ ಪರಿಸರದ ಮೇಲಿನ ತ್ಯಾಜ್ಯದ ಪರಿಣಾಮವನ್ನು ಕಡಿಮೆ ಮಾಡಲು ಸಮಗ್ರ ತ್ಯಾಜ್ಯ ನಿರ್ವಹಣೆಯು ವಿಶಾಲವಾದ ಕಾರ್ಯಚಟುವಟಿಕೆಯಾಗಿದೆ ಎಂದು ತಿಳಿಸಿದರು.
ಸಮುದಾಯಗಳಲ್ಲಿ ಉತ್ಪಾದನೆಯಾಗುವ ಕಸ, ಕಸದ ಸಂಗ್ರಹ, ಸಾಗಣೆ, ವಿಂಗಡಣೆ, ಸಂಸ್ಕರಣೆ ಮತ್ತು ವಿಲೇವಾರಿ ಪ್ರಕ್ರಿಯೆಗಳನ್ನು ಸೂಕ್ತವಾಗಿ ಅರಿತುಕೊಳ್ಳಬೇಕು. ಆರೋಗ್ಯಕರ ಮತ್ತು ಸುಸ್ಥಿರ ಸಮುದಾಯಗಳನ್ನು ನಿರ್ಮಿಸಲು ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಪ್ರಮುಖ ಗುರಿಯಾಗಿದೆ ಎಂದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಅಬ್ದುಲ್ ರೆಹಮಾನ್ ಮಾತನಾಡಿ, ತರಬೇತಿ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು. ಸೂಕ್ತ ಸಲಹೆ-ಸೂಚನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ನಗರ, ಪಟ್ಟಣ, ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತೆ ಅಭಿವೃದ್ದಿಗೆ ಆದ್ಯತೆ ನೀಡಲು ಮುಂದಾಗಬೇಕು ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಪ್ರಕೃತಿ ಫೌಂಡೇಷನ್, ಬೆಂಗಳೂರು ಮತ್ತು ಲೆಟ್ ಬಿ ದ ಚೇಂಜ್ ಸಂಸ್ಥೆಯ ಪದಾಧಿಕಾರಿಗಳು, ಮೂಲ ಘನ ತ್ಯಾಜ್ಯ ನಿರ್ವಹಣೆ ಹಾಗೂ ಮೂಲ ವಿಂಗಡಣೆ ಮತ್ತು ಮನೆಯಲ್ಲಿಯೇ ಗೊಬ್ಬರ ತಯಾರಿಕೆಯ ಕುರಿತು ನೇರ ಸಂದರ್ಶನದ ಮೂಲಕ ತರಬೇತಿ ನೀಡಲಾಯಿತು.