ಬಳ್ಳಾರಿ : ಮಹಾರಾಷ್ಟ್ರದ ಬಿಜೆಪಿಯು ಕರ್ನಾಟಕ ಸರ್ಕಾರ ವಾದಾ ಕಿಯಾ _ ಧೋಖಾ ದಿಯಾ ಎಂದು ಸುಳ್ಳು ಜಾಹೀರಾತಿಗೆ ವಾದಾ ದಿಯಾ _ ಪೂರಾ ಕಿಯಾ ಎಂದು ಸಿ.ಎಂ.ಸಿದ್ದರಾಮಯ್ಯ ತಿರುಗೇಟು ನೀಡಿದರು.
ಸಂಡೂರಿನ ಬೊಮ್ಮಘಟ್ಟದಲ್ಲಿ ನಡೆದ ಜನ ಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣಮ್ಮ ಪರ ಮತಯಾಚಿಸಿ ಮಾತನಾಡಿದರು. ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಭರವಸೆ ನೀಡಿತ್ತು. ಭರವಸೆ ಈಡೇರಿಸದೇ, ಯೋಜನೆಯನ್ನೇ ಇನ್ನೂ ಆರಂಭಿಸದೆ ವಂಚಿಸಿದೆ ಎನ್ನುವ ಅರ್ಥದ ಪರಮ ಸುಳ್ಳಿನ ಜಾಹಿರಾತುಗಳನ್ನು ಪುಟಗಟ್ಟಲೆ ನೀಡಿದೆ ಎಂದು ಕಿಡಿಕಾರಿದರು. ಬಿಜೆಪಿಯವರಿಗೆ ಸುಳ್ಳೇ ಮನೆ ದೇವರು. ರಾಜ್ಯದಲ್ಲಿ ಶಕ್ತಿ ಯೋಜನೆ ಸೇರಿದಂತೆ ಐದಕ್ಕೆ ಐದೂ ಗ್ಯಾರಂಟಿಗಳು ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿದೆ. ಗೃಹಲಕ್ಷ್ಮಿಯ ಮುಂದಿನ ಕಂತಿನ ಹಣ ಒಂದೆರಡು ದಿನಗಳಲ್ಲೇ ಬಿಡುಗಡೆ ಕೂಡ ಆಗುತ್ತದೆ. ಆದರೆ, ಬಿಜೆಪಿಯವರು ಸುಳ್ಳುಗಳನ್ನು ಹರಡಿಸುತ್ತಾ, ಸುಳ್ಳುಗಳನ್ನು ಹರಡುವುದಕ್ಕೇ ಕೋಟಿ ಕೋಟಿ ಖರ್ಚು ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ವಿದೇಶದಲ್ಲಿರುವ ಕಪ್ಪುಹಣ ತಂದು ಎಲ್ಲರ ಖಾತೆಗೆ 15 ಲಕ್ಷ ರೂ. ಕೊಡ್ತೀವಿ ಅಂತ ಹೇಳಿದ್ರಲ್ಲಾ ಮೋದಿಯವರೇ ಕೊಟ್ರೇನ್ರೀ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದ್ರಲ್ಲಾ ಮೋದಿಯವರೇ, ಉದ್ಯೋಗ ಸೃಷ್ಟಿ ಮಾಡಿದ್ರಾ ? ಎಲ್ರೀ ಸ್ವಾಮಿ ನಿಮ್ಮ ಅಚ್ಚೆ ದಿನ್? ರೈತರ ಆದಾಯ ದುಪ್ಪಟ್ಟು ಮಾಡ್ತೀನಿ ಅಂದ್ರಲ್ಲಾ ಮೋದಿಯವರೇ ಮಾಡಿದ್ರಾ ? ಮೋದಿ ಪ್ರಧಾನಿ ಆಗುವ ಮೊದಲು ದೇಶದ ಸಾಲ ಇದ್ದದ್ದು 54 ಲಕ್ಷ ಕೋಟಿ ಮಾತ್ರ ಇತ್ತು. ಈಗ ನಿಮ್ಮ ಅವಧಿಯಲ್ಲಿ ದೇಶದ ಸಾಲವನ್ನು 185 ಲಕ್ಷ ಕೋಟಿಗೆ ಏರಿಸಿದ್ದೀರಿ. ಇದೇನಾ ಸ್ವಾಮಿ ನಿಮ್ಮ ಅಚ್ಚೆ ದಿನ್ ಎಂದು ವ್ಯಂಗ್ಯವಾಡಿದರು. ಮಾಜಿ ಸಚಿವ ಜನಾರ್ದನರೆಡ್ಡಿ ಯನ್ನು ಬಿಜೆಪಿಗೆ ಸೇರಿಸಿಕೊಂಡಿದ್ದಾರೆ. ರೆಡ್ಡಿಯನ್ನು ನ್ಯಾಯಲಯವೇ ಅಪರಾಧಿ ಎಂದು ಘೋಷಿಸಿ ಜೈಲಿಗೆ ಹಾಕಿತ್ತು. ಬಿಜೆಪಿ ಹಾಗೂ ಮೋದಿಗಾಗಲಿ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಯೋಗ್ಯತೆ ಇದೆಯಾ ಎಂದು ಪ್ರಶ್ನಿಸಿದರು. ಅನ್ನಪೂರ್ಣಮ್ಮ ನನ್ನ ಆತ್ಮೀಯ ಸ್ನೇಹಿತನ ಮಗಳು ಗೆದ್ದರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ವೇಗವಾಗಿ ಮುಂದುವರೆಯುತ್ತವೆ. ರಾಜ್ಯದಲ್ಲಿನ ಬಡವರಿಗೆ ಗ್ಯಾರಂಟಿಗಳಿಂದ ಬಡವರಿಗೆ ಅನುಕೂಲವಾಗಿದೆ. ಬಿಜೆಪಿ ಅಧಿಕಾರದ ರಾಜ್ಯದಲ್ಲಿ ಯಾವ ಗ್ಯಾರಂಟಿ ಯೋಜನೆಗಳು ಜಾರಿಗೊಳಿಸಿಲ್ಲ ಎಂದು ಕಿಡಿಕಾರಿದರು.