ವಿವಿ ಪ್ರೊ.ಮೋಹನ್‌ದಾಸ್ ಅಮಾನತುಗೊಳಿಸಿ

Published on

ಬಳ್ಳಾರಿ : ಇಲ್ಲಿನ ವಿಎಸ್‌ಕೆ ವಿವಿಯ ಹೊರಗುತ್ತಿಗೆ ಸಿಬ್ಬಂದಿ ಬಾಲಚಂದ್ರ ಆತ್ಮಹತ್ಯೆಗೆ ಕಾರಣರಾದ ಪ್ರೊ. ಮೋಹನ್‌ದಾಸ್ ಅವರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿ ವಿವಿ ಆವರಣದಲ್ಲಿ ಎಬಿವಿಪಿ ಸಂಘಟನೆಯು ಪ್ರತಿಭಟಿಸಿ ಶನಿವಾರ ಮನವಿ ಸಲ್ಲಿಸಿತು.

ಎಬಿವಿಪಿ ಸಂಘಟನೆಯ ರಾಜ್ಯ ಸಹಕಾರ್ಯದರ್ಶಿ ವಿನೋದ ಮಾತನಾಡಿ, ಪ್ರೊ.ಮೋಹನ್‌ದಾಸ್ ಎಂಬಾತ ಈ ಹಿಂದೆ ವಿವಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿಯ ಶುಲ್ಕದಲ್ಲಿಯೂ ಹೆಚ್ಚುವರಿ ಹಣ ತೆಗೆದುಕೊಂಡಿರುತ್ತಾರೆೆ. ಅಲ್ಲದೆ, ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಹಣ ಕೊಟ್ಟರೆ ಮಾತ್ರ ಪ್ರಮಾಣ ಪತ್ರ ನೀಡುವುದಾಗಿ ಬೆದರಿಕೆ ಹಾಕಿದ್ದರು ಎಂಬುದಾಗಿ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ವಿವಿಯ ಗುತ್ತಿಗೆ ಆಧಾರದ ಮೇಲೆ ನೇಮಕವಾಗಿದ್ದ ಗ್ರಂಥಾಲಯದ ಅಟೆಂಡರ್ ಬಾಲಚಂದ್ರ ಅವರು ಮೋಹನದಾಸ್ ಬಳಿ ಮೂರು ವರ್ಷಗಳ ಹಿಂದೆ ಒಂದು ಲಕ್ಷ ರೂ. ಸಾಲ ಪಡೆದಿದ್ದರು. ಬಡ್ಡಿ ಸೇರಿ ಅದು ಮೂರು ಲಕ್ಷ ರೂ. ಆಗಿತ್ತು. ಮೇರಿ ಎಂಬ ಮಹಿಳೆಯ ಬಳಿ ಚೀಟಿ ಹಣ ಹಾಕಿಸಿದ್ದ ಮೋಹನದಾಸ್ ಚೀಟಿ ಹಣವನ್ನೂ ವಸೂಲಿ ಮಾಡಿ ಮಾನಸಿಕ ಕಿರುಕುಳ ನೀಡಿದ್ದರಿಂದ ಮನನೊಂದು ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ದರಿಂದ, ಮೋಹನದಾಸ್ ಅವರನ್ನು ಅಮಾನತುಗೊಳಿಸಬೇಕು. ಅಲ್ಲದೆ, ಮೃತ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net