

ಬಳ್ಳಾರಿ: ಯುವಜನಾಂಗ ಸ್ವಾಮಿವಿವೇಕಾನಂದರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಸಹಕರಿಸಬೇಕು ಎಂದು ಧಾರವಾಡ ರಾಮಕೃಷ್ಣ ಆಶ್ರಮದ ಯೂತ್ ಕಮಿಟಿ ಸದಸ್ಯ ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರ ಜೆ.ಸಿ.ರಾಜಶೇಖರ್ ಹೇಳಿದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ವಿದ್ಯಾರ್ಥಿ ಕಲ್ಯಾಣ ಘಟಕ ಆಯೋಜಿಸಿದ್ದ ಸ್ವಾಮಿವಿವೇಕಾನಂದರ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿವೇಕಾನಂದರು ಜ್ಞಾನಕೇಂದ್ರಿತ ವ್ಯಕ್ತಿತ್ವ ಉಳ್ಳವರು. ಹಿಂದು ಧರ್ಮದ ತತ್ವಗಳನ್ನು ಜಗತ್ತಿಗೆ ಪರಿಚಯಿಸಿದ ಮಹಾನ್‌ವ್ಯಕ್ತಿ. ಅವರು ಯಾವುದೇ ಒಂದು ರಾಷ್ಟ್ರ, ಜನಾಂಗ, ಧರ್ಮಕ್ಕೆ ಸೀಮಿತವಾದವರಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಸಿದ್ದು ಪಿ.ಅಲಗೂರ ಮಾತನಾಡಿ, ಯಾರಲ್ಲಿ ಆತ್ಮ ವಿಶ್ವಾಸವಿರುತ್ತದೆಯೋ ಅವರು ಜೀವನದಲ್ಲಿ ಎಲ್ಲವನ್ನೂ ಸಮರ್ಥವಾಗಿ ಎದುರಿಸಬಹುದು ಎಂದರು.
ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎಸ್. ಸಿ.ಪಾಟೀಲ್, ಪ್ರೊ. ಜಿ.ಪಿ. ದಿನೇಶ್ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶಶಿಧರ ಕೆಲ್ಲೂರ್ ಕಾರ್ಯಕ್ರಮ ನಿರೂಪಿಸಿದರು. ರಸಾಯನಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಡಾ. ಅರುಣಕುಮಾರ ಲಗಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಕಲ್ಯಾಣ ಘಟಕದ ನಿರ್ದೇಶಕ ಪ್ರೊ. ಜಿ.ಪಿ. ದಿನೇಶ್ ವಂದಿಸಿದರು. ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.