ಬಳ್ಳಾರಿ, ವಿಜಯನಗರ ಅವಳಿ ಜಿಲ್ಲೆಗಳಲ್ಲಿ ವೆಂಟಿಲೇಟರ್ ಕೊರತೆ

Ballari DC Press meet
ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಡಿಸಿ ಪವನ್‌ಕುಮಾರ್ ಮಾಲಪಾಟಿ ಮಾತನಾಡಿದರು. ಜಿಪಂ ಸಿಇಒ ಕೆ.ಆರ್.ನಂದಿನಿ, ಎಸ್ಪಿ ಸೈದುಲು ಅದಾವತ್, ಎಡಿಸಿ ಮಂಜುನಾಥ್ ಇದ್ದರು.
Published on

ಬಳ್ಳಾರಿ: ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ವೆಂಟಿಲೇಟರ್ ಕೊರತೆಯಿದೆ. ಹಾಗಾಗಿ ಮಹಾಮಾರಿ ಕರೊನಾ ನಿಯಂತ್ರಿಸಲಾಗದ ಪರಿಸ್ಥಿತಿ ಎದುರಾಗಿದೆ ಎಂದು ಜಿಲ್ಲಾಧಿಕಾರಿ ಪವನ ಕುಮಾರ ಮಾಲಪಾಟಿ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಲೇ ಇದೆ. ಸೋಂಕಿತರ ಸಂಖ್ಯೆ ಹೆಚ್ಚಳದ ಜತೆ ಸೋಂಕಿತರ ಸಾವಿನ ಸರಣಿ ಕೂಡ ಮುಂದುವರಿದಿದೆ ಎಂದರು.

ಹತ್ತು ದಿನಗಳಲ್ಲಿ 100ಕ್ಕೂ ಅಧಿಕ ಸೋಂಕಿತರು ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 735ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ನಿತ್ಯ ಕರೊನಾ ಸೋಂಕಿತರ ಸಂಖ್ಯೆ ಒಂದು ಸಾವಿರ ಗಡಿ ದಾಟುತ್ತಿದೆ. ಸದ್ಯ ಜಿಲ್ಲೆಯಲ್ಲಿ 9531 ಸಕ್ರಿಯ ಪ್ರಕರಣಗಳಿದ್ದು, 5002 ಸೋಂಕಿತರು ಹೋಂ ಐಸೊಲೇಷನ್‌ನಲ್ಲಿದ್ದಾರೆ. 829 ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 1200 ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆ ಇದೆ. ಆದರೆ, ಜಿಲ್ಲೆಯಲ್ಲಿ ಕೇವಲ 60 ವೆಂಟಿಲೇಟರ್‌ಗಳು ಮಾತ್ರ ಇದ್ದು ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರಿಗೆ ಸಮರ್ಪಕವಾಗಿ ವೆಂಟಿಲೇಟರ್ ಸೌಲಭ್ಯ ಸಿಗುತ್ತಿಲ್ಲ. ಇದರಿಂದ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣವಾಗುತ್ತಿದೆ. ಅದರ ಜತೆ ಗಂಭೀರ ಸ್ಥಿತಿಯಲ್ಲಿರುವವರು ಆಸ್ಪತ್ರೆಗೆ ದಾಖಲಾಗದೆ ಮನೆಯಲ್ಲಿ ಚಿಕಿತ್ಸೆ ಪಡೆದು ಕೊನೆಯ ಹಂತದಲ್ಲಿ ಆಸ್ಪತ್ರೆಗೆ ದಾಖಲಾಗುವುದರಿಂದ ಚಿಕಿತ್ಸೆ ಫಲಕಾರಿಯಾಗುತ್ತಿಲ್ಲ ಎಂದರು.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಆಕ್ಸಿಜನ್ ಬೆಡ್‌ಗಳ ಸಂಖ್ಯೆ ಹೆಚ್ಚಳ ಮಾಡಲಾಗುತ್ತಿದೆ. ಈಗ ಜಿಂದಾಲ್ ಕಂಪನಿಯಲ್ಲಿ ಮೇ 9ರೊಳಗೆ ಒಂದು ಸಾವಿರ ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಅದರ ಜತೆ ಇನ್ನೂ 50 ವೆಂಟಿಲೇಟರ್‌ಗಳ ಪೂರೈಕೆಗಾಗಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಜತೆಗೆ ಆರ್‌ಟಿಪಿಸಿಆರ್ ಟೆಸ್ಟ್ ರಿಪೋರ್ಟ್ ವಿಳಂಬವಾಗುತ್ತಿದ್ದರಿಂದ ಜಿಲ್ಲಾಸ್ಪತ್ರೆಯಲ್ಲಿ ಮತ್ತೊಂದು ಕೋವಿಡ್ ಟೆಸ್ಟಿಂಗ್ ಲ್ಯಾಬ್ ಮಾಡಲು ಜಿಲ್ಲಾಡಳಿತ ಮುಂದಾಗಿದೆ ಎಂದರು.

ಬಳ್ಳಾರಿ ಜಿಲ್ಲೆಯಲ್ಲಿ ನಿತ್ಯೂ ಒಂದು ಸಾವಿರ ಟನ್ ಆಕ್ಸಿಜನ್ ಉತ್ಪಾದನೆಯಾಗುತ್ತಿದೆ. ಈ ಜಿಲ್ಲೆಗೆ ಬೇಕಾಗುವ 27 ಟನ್ ಆಕ್ಸಿಜನ್ ಪೂರೈಕೆಯಾಗುತ್ತಿದೆ. ಕರ್ನಾಟಕ ಸೇರಿದಂತೆ ನೆರೆಹೊರೆಯ ರಾಜ್ಯಗಳಿಗೆ ನಿತ್ಯ 800 ಟನ್ ಆಕ್ಸಿಜನ್ ಪೂರೈಕೆಯಾಗುತ್ತಿದೆ ಎಂದು ಡಿಸಿ ಮಾಲಪಾಟಿ ತಿಳಿಸಿದ್ದಾರೆ. ಜಿಪಂ ಸಿಇಒ ಕೆ.ಆರ್.ನಂದಿನಿ, ಎಸ್ಪಿ ಸೈದುಲು ಅದಾವತ್, ಎಡಿಸಿ ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net