

ಬಳ್ಳಾರಿ: ಗಣಿನಾಡು ಖ್ಯಾತಿಯ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ 449 ಗ್ರಾಮಗಳು ಕರೊನಾ ಸೋಂಕಿನಿಂದ ಮುಕ್ತವಾಗಿವೆ. ಬಳ್ಳಾರಿ 13, ಹೂವಿನ ಹಡಗಲಿ 69, ಹಗರಿ ಬೊಮ್ಮನಹಳ್ಳಿ 27, ಹರಪನಹಳ್ಳಿ 93, ಹೊಸಪೇಟೆ 19, ಕಂಪ್ಲಿ 19, ಕೊಟ್ಟೂರು 12, ಕೂಡ್ಲಿಗಿ 24, ಕುರುಗೋಡು 84, ಸಂಡೂರು 2 ಹಾಗೂ ಸಿರಗುಪ್ಪ ತಾಲೂಕಿನ 74 ಗ್ರಾಮಗಳು ಕರೊನಾ ಸೋಂಕಿನಿಂದ ಮುಕ್ತಗೊಂಡಿದ್ದು, ಗ್ರಾಮೀಣ ಭಾಗದಲ್ಲಿ ಕೊಂಚಮಟ್ಟಿಗೆ ಸೋಂಕಿನ ಭಯ ನಿರ್ಮೂಲನೆಯಾದಂತಾಗಿದೆ.
ಅವಳಿ ಜಿಲ್ಲೆ ವ್ಯಾಪ್ತಿಯಲ್ಲಿ 237 ಗ್ರಾಮ ಪಂಚಾಯಿತಿಗಳಿದ್ದು, 1043 ಗ್ರಾಮಗಳಿವೆ. ಒಟ್ಟಾರೆ ಗ್ರಾಮಗಳಲ್ಲಿ 15421 ಕರೊನಾ ಸೋಂಕಿತರಿದ್ದರು. ಆದರೀಗ ಕೇವಲ 2687 ಸಕ್ರಿಯ ಪ್ರಕರಣಗಳಿವೆ. ಕಂಪ್ಲಿ ಹಾಗೂ ಕೊಟ್ಟೂರು ತಾಲೂಕಿನಲ್ಲಿ ಸಾವಿರದೊಳಗಡೆ ಕರೊನಾ ಸೋಂಕಿತರ ಸಂಖ್ಯೆಯಿದ್ದು, ಉಳಿದೆಲ್ಲ ತಾಲೂಕುಗಳಲ್ಲಿ ಈ ಸೋಂಕಿತರ ಸಂಖ್ಯೆ ಸಾವಿರದ ಗಡಿಯನ್ನು ದಾಟಿತ್ತು. ಸದ್ಯ ಉಭಯ ಜಿಲ್ಲೆಗಳ 66 ಗ್ರಾಮಗಳಲ್ಲಿ ಹತ್ತಕ್ಕಿಂತಲೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. 111ಗ್ರಾಮಗಳಲ್ಲಿ ಹತ್ತಕ್ಕಿಂತ ಕಡಿಮೆ ಹಾಗೂ ಐದಕ್ಕಿಂತ ಹೆಚ್ಚು ಪ್ರಕರಣ ಗಳಿವೆ. 417 ಗ್ರಾಮಗಳಲ್ಲಿ ಐದಕ್ಕಿಂತ ಕಡಿಮೆ ಪ್ರಕರಣಗಳಿವೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.