ಇಂದಿನ ಕಾವ್ಯಗಳಲ್ಲಿ ಮೌಲ್ಯಗಳು ಕಾಣಲಾರೆವು

Published on

ಬಳ್ಳಾರಿ ; ಪ್ರಸ್ತುತವಾಗಿ ಇಂದಿನ ಕಾವ್ಯಗಳಲ್ಲಿ ಮಾನವಿಯ ಮೌಲ್ಯಗಳು ಕಾಣಲಾರೆವು. ಇಂದಿನ ತಲ್ಲಣಗಳು ಸಾಮಾಜಿಕ ಜೀವನಯಾನಗಳನ್ನು ಹಾಳುಮಾಡುತ್ತಿವೆ ಎಂದು ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ ಹೇಳಿದರು.

ಇಲ್ಲಿನ ವಿಎಸ್‌ಕೆ ವಿವಿ ಸಭಾಂಗಣದಲ್ಲಿ ಸಂತಕವಿ ಕನಕದಾಸ ಮತ್ತು ತತ್ವಪದಕಾರ ಅಧ್ಯಯನ ಕೇಂದ್ರ ಹಾಗೂ ವಿವಿ ಕನ್ನಡ ಅಧ್ಯಯನ ವಿಭಾಗದ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ ಕನ್ನಡ ಕಾವ್ಯ ಪರಂಪರೆ ಮತ್ತು ಕನಕದಾಸ ಎರಡು ದಿನಗಳ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದ ಒಳಿತಿಗಾಗಿ ಹಲವಾರು ಕವಿಗಳು ದಾರ್ಶನಿಕರಾಗಿದ್ದಾರೆ. ಪ್ರಸ್ತುತ ಸಮಾಜದಲ್ಲಿ ಕೂಡಿ ಬಾಳುವ ಸಂದೇಶ ನೀಡುವ ಕಾವ್ಯಗಳು ರಚನೆಯಾಗಬೇಕು ಎಂದರು.

ಕನ್ನಡ ಕಾವ್ಯ ಪರಂಪರೆಯಲ್ಲಿ ಕನಕದಾಸರನ್ನು ಉನ್ನತ ಸ್ಥಾನದಲ್ಲಿರಿಸಿದ್ದೇವೆ. 15ನೇ ಶತಮಾನದಲ್ಲಿನ ಕನಕದಾಸರ ಕಾವ್ಯ ಹಾಗೂ ತತ್ವಪದಗಳು ಮಾನವಿ ಮೌಲ್ಯಗಳಿಂದ ಇಂದಿಗೂ ಪ್ರಸ್ತುತವಾಗಿವೆ. ಸಮಾಜದ ಸಂಕಿರ್ಣ ವ್ಯವಸ್ತೆಯನ್ನು ಬಿಡಿಸಿ ಹೇಳುತ್ತವೆ ಎಂದರು.

ವಿಎಸ್‌ಕೆ ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಮಾತನಾಡಿ, ಕನಕದಾಸರ ಕೀರ್ತನೆಗಳಲ್ಲಿ ಜನರ ಸಾಮಾಜಿಕ ಬದುಕಿನ ವಾಸ್ತವಾಂಶಗಳನ್ನು ಗುರುತಿಸಿದ್ದಾರೆ. ಸಾಮಾಜಿಕ ಬದುಕನ್ನು ತಿದ್ದುತ್ತಾ ಅಂತರಂಗದ ಅರಿವಿನ ಬೆಳಕನ್ನು ಹೊತ್ತಿಸಿದರು. ಕನಕದಾಸರು ತಮ್ಮ ಕಾಲದಲ್ಲಿನ ಸಂಕಿರ್ಣ ವ್ಯವಸ್ಥೆಯನ್ನು ಕಾವ್ಯಗಳ ಮುಖಾಂತರ ತಿಳಿಸಿದ್ದಾರೆ. ವಿದ್ಯಾರ್ಥಿಗಳು ಚರ್ಚಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳಬಹುದು. ವಿವಿಯಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ನಾನಾ ರಾಜ್ಯಗಳಿಂದ ಸಂಶೋಧನಾ ವಿದ್ಯಾರ್ಥಿಗಳು ಸೇರಿದಂತೆ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. ನಂತರದಲ್ಲಿ ವಿಚಾರಗೋಷ್ಠಿಗಳು ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net