ಪಿಎಂಎಫ್ಎಂಇ ಯೋಜನೆ ಬಳಸಿಕೊಳ್ಳಿ

Published on

ಬಳ್ಳಾರಿ ; ಮಹಿಳೆಯರು ಸಣ್ಣ ಒಕ್ಕೂಟಗಳನ್ನು ಮಾಡಿಕೊಂಡು ಕೃಷಿ ಇಲಾಖೆಯಡಿ ದೊರೆಯುವ ಪಿಎಂಎಫ್ಎಂಇ ಯೋಜನೆ ಸದುಪಯೋಗಪಡಿಸಿಕೊಳ್ಳಬೇಕು ಎಂದು

ಉಪ ಕೃಷಿ ನಿರ್ದೇಶಕ ಎಸ್. ಎನ್. ಮಂಜುನಾಥ ಹೇಳಿದರು.

ನಗರದ ಜಂಟಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಮಹಿಳಾ ಕಿಸಾನ್ ದಿವಸ್ ಅಂಗವಾಗಿ ಬಳ್ಳಾರಿ ಹಾಗೂ ಕುರುಗೋಡು ತಾಲೂಕಿನ ಮಹಿಳಾ ಸ್ವಸಹಾಯ ಗುಂಪುಗಳಿಗೆ ಕೌಶಲ್ಯಾಭಿವೃದ್ಧಿ ಹಾಗೂ ಬಲವರ್ಧನೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳೆಯರು ಅಧಿಕ ಆದಾಯವನ್ನು ಗಳಿಸುವಂತಹ ಸಣ್ಣ ಪ್ರಮಾಣದ ಚಟುವಟಿಕೆಗಳನ್ನು ಮಹಿಳಾ ಸ್ವಸಹಾಯ ಸಂಘಗಳು ಕೈಗೊಳ್ಳಬೇಕು. ಕೇವಲ ಕೃಷಿ ಇಲಾಖೆ ಅಲ್ಲದೇ, ಮೀನುಗಾರಿಕೆ, ತೋಟಗಾರಿಕಾ ಇಲಾಖೆೆಯಲ್ಲೂ ಸಹ ಗುಂಪುಗಾರಿಕೆಗೆ ಅವಕಾಶವಿದ್ದು, ತಾವೆಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆ ಮುಖಾಂತರ ತೋರಿಸಲಾಗುತ್ತಿರುವ ಜಾಮ್ ತಯಾರಿ ಹಾಗೂ ಕ್ರೋಶೆಟ್ ಚಟುವಟಿಕೆಯನ್ನು ಮುಂದಿನ ಒಂದು ವರ್ಷದೊಳಗೆ ಮಹಿಳಾ ಸ್ವಸಹಾಯ ಸಂಘಗಳು ಅಥವಾ ಕೃಷಿ ಸಖಿಯರು ಅಳವಡಿಸಿಕೊಳ್ಳಬೇಕು. ಮಹಿಳಾ ಸ್ವಸಹಾಯ ಸಂಘಗಳು ತಮ್ಮ ಉತ್ಪನ್ನಗಳನ್ನು ಬ್ರಾಂಡಿಂಗ್ ಮಾಡಿ ಮಾರಾಟ ಮಾಡಬೇಕು. ಒಳ್ಳೆಯ ಉತ್ಪನ್ನವನ್ನು ತಯಾರಿಸಿದಲ್ಲಿ, ತಮ್ಮಲ್ಲಿಗೇ ಬಂದು ಖರೀದಿಸುತ್ತಾರೆ. ಇದರಿಂದ ತಮ್ಮ ಉತ್ಪನ್ನದ ಬೇಡಿಕೆ ಕೂಡ ಹೆಚ್ಚಾಗುತ್ತದೆ. ಕೃಷಿ ಸಖಿಯರು ಎಲ್ಲ ಇಲಾಖೆಗಳ ಸೌಲಭ್ಯಗಳನ್ನು ತಿಳಿದು ಮಹಿಳಾ ಸ್ವಸಹಾಯ ಸಂಘಗಳಿಗೆ ಹಾಗೂ ರೈತ ಶಕ್ತಿ ಗುಂಪುಗಳಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

ಸಹಾಯಕ ಕೃಷಿ ನಿರ್ದೇಶಕ ನದಾಫ್ ಮಾತನಾಡಿ, ರೈತ ಮಹಿಳೆಯರು ಕೇವಲ ಮನೆಕೆಲಸಕ್ಕಷ್ಟೇ ಸೀಮಿತವಾಗದೆ, ಮನೆಯ ಖರ್ಚನ್ನು ಭರಿಸುವ ಸಣ್ಣ ಉದ್ಯಮಗಳಾದ ಹಸಿಮೆಣಸಿನ ಪುಡಿ, ಅಗಸೆ ಪುಡಿ, ಗುಲಾಬ್ ಜಾಮೂನ್ ಪುಡಿ, ಮಿಕ್ಸ್ಹಣ್ಣಿನ ಜಾಮ್ ಇನ್ನೂ ಮುಂತಾದವುಗಳನ್ನು ಒಂದು ಬ್ರಾಂಡ್ ಹೆಸರನ್ನು ನೀಡಿ ತಮ್ಮ ಹಳ್ಳಿಗಳಲ್ಲಿ ಅಥವಾ ತಾಲೂಕಿನ ಮಳಿಗೆಗಳಲ್ಲಿ ಮಾರಬಹುದು. ಇದರಿಂದ ಮಹಿಳೆಯರು ಉಳಿತಾಯದ ಮನೋಭಾವವನ್ನು ಬೆಳೆಸಿಕೊಂಡು ಅಧಿಕ ಲಾಭವನ್ನು ಗಳಿಸಿ ಆರ್ಥಿಕವಾಗಿ ಸಶಕ್ತರಾಗಬೇಕೆಂದು ಮಹಿಳೆಯರಿಗೆ ಹುಮ್ಮಸ್ಸು ನೀಡಿದರು.

ಬಳಿಕ ಮಹಿಳಾ ಸ್ವಸಹಾಯ ಗುಂಪುಗಳಿಗೆ ಹಾಗೂ ಕೃಷಿ ಸಖಿಯರಿಗೆ ಸೀರೆಗಳಿಗೆ ಕ್ರೋಶೆಟ್ ಕೆಲಸ (ಕೊಂಬೆ ಹೆಣಿಗೆ) ಹಾಗೂ ವೇಸ್ಟ್ ಬಟ್ಟೆಗಳಿಂದ ಮ್ಯಾಟ್ ತಯಾರಿಸುವದರ ಬಗ್ಗೆ ಪ್ರಾತ್ಯಕ್ಷಿಕೆಯ ಮುಖಾಂತರ ತರಬೇತಿಯನ್ನು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net