ಬಳ್ಳಾರಿ ; ಸುಸ್ಥಿರ ಭವಿಷ್ಯ ರೂಪಿಸಲು ನವೀಕರಿಸಬಹುದಾದ ಇಂಧನಗಳ ಬಳಕೆಯ ಅಗತ್ಯತೆ ಇಂದು ಜರೂರಾಗಿದೆ ಎಂದು ವಿಜ್ಞಾನ ಸಾಹಿತ್ಯ ಲೇಖಕ ಡಾ.ಯು.ಶ್ರೀನಿವಾಸ ಮೂರ್ತಿ ಪ್ರತಿಪಾದಿಸಿದರು.
ನಗರದ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತ ಜ್ಞಾನ - ವಿಜ್ಞಾನ ಸಮಿತಿ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. 2030 ರ ವೇಳೆಗೆ ಸೌರಶಕ್ತಿ, ಪವನಶಕ್ತಿ, ಉಬ್ಬರವಿಳಿತ, ಭೂಶಾಖ ಮತ್ತು ಜಲಶಕ್ತಿಯಂತಹ ಪುನರ್ ನವೀಕರಣ ಶಕ್ತಿಗಳನ್ನು ಹೆಚ್ಚು ಬಳಸುತ್ತಾ ಭೂಮಿಯ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಭೂಮಿಯ ಮೇಲೆ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ಇದಕ್ಕೆಲ್ಲ ಕಾರಣ ನಾವು ಬಳಸುವ ವಾಹನಗಳ ಸಂಚರ, ಕಾರ್ಖಾನೆಗಳು, ರಾಸಾಯನಿಕ ಗೊಬ್ಬರಗಳು ಮೊದಲಾದವು ಭೂಮಿಯ ಮೇಲೆ ಕಾರ್ಬನ್ ಪ್ರಮಾಣ ಹೆಚ್ಚಿಸುತ್ತಿವೆ. ಇದರಿಂದ ಕಾರ್ಬನ್ ಡೈಆಕ್ಸೈಡ್ ಹೆಚ್ಚಾಗಿ ಭೂಮಿಯ ಮೇಲೆ ಬಿಸಿ ಹೆಚ್ಚಾಗುತ್ತಿದೆ. ಇದು ಜೀವಸಂಕುಲದ ನಾಶಕ್ಕೆ ಸಂಚಕಾರ ತರಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಜಾಗತಿಕ ತಾಪಮಾನದಿಂದಾಗಿ ಋತುಗಳು ಅಕಾಲಿಕವಾಗಿವೆ, ಮಳೆ ಅತಿಯಾಗಿ ಬಿದ್ದು ನೆರೆ ಉಂಟಾಗುತ್ತಿದೆ. ಮತ್ತೊಂದು ಕಡೆ ಬರ ಉಂಟಾಗುತ್ತಿದೆ. ನೀರು ಇಲ್ಲದಂತಾಗಿ ಗಾಳಿಯಲ್ಲಿನ ನೀರು ಬಿಸಿಯಾಗಿ ಬಿಸಿ ಅಲೆಗಳನ್ನು ಸೃಷ್ಟಿಸುತ್ತದೆ. ಬಿಸಿ ಅಲೆಗಳು ಜೀವಸಂಕುಲದ ಬದುಕಿಗೆ ಮಾರಕವಾಗಿ ಪರಿಣಮಿಸಲಿವೆ ಎಂದರು.
ಪ್ರೊ. ಮೋನಿಕಾ ಮಾತನಾಡಿ, ರೈತರ ಮಕ್ಕಳು ತಮ್ಮದೇ ಕ್ಷೇತ್ರದಲ್ಲಿ ಸಂಶೋಧನೆ ಮಾಡುವಂತಾಗಬೇಕು.ರೈತರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿದು ಸಮಾಜಕ್ಕೆ ಕೊಡುಗೆ ನೀಡಬೇಕು. ವಿಜ್ಞಾನದ ಕಲಿಕೆ ಸರಳ ಅನಿಸದಿರಬಹುದು. ಆದರೆ, ಅವಕಾಶಗಳು ಹೆಚ್ಚು. ಇದು ನಮ್ಮೆಲ್ಲರಲ್ಲಿ ವೈಚಾರಿಕತೆ ಮೂಡಿಸುತ್ತದೆ ಎಂದರು.